ಅಡಿಲೇಡ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಎರಡನೇ ಟೆಸ್ಟ್ ಪಂದ್ಯವನ್ನು ಟೀಂ ಇಂಡಿಯಾ ಹೀನಾಯವಾಗಿ ಸೋತಿದೆ. ಭಾರತ ನೀಡಿ 19 ರನ್ ಗಳ ಗೆಲುವಿನ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ವಿಕೆಟ್ ನಷ್ಟವಿಲ್ಲದೇ 19 ರನ್ ಗಳಿಸುವ ಮೂಲಕ ಸರಣಿ ಸಮಬಲ ಸಾಧಿಸಿದೆ.
ಮೊದಲ ಟೆಸ್ಟ್ ಪಂದ್ಯದಲ್ಲಿ ರೋಹಿತ್, ಗಿಲ್ ರಂತಹ ಪ್ರಮುಖ ಆಟಗಾರರಿಲ್ಲದೇ ಇದ್ದರೂ ಬುಮ್ರಾ ನಾಯಕತ್ವದಲ್ಲಿ ತಂಡ ಅದ್ಭುತ ಗೆಲುವು ದಾಖಲಿಸಿತ್ತು. ಇದಕ್ಕೆ ಮೊದಲು ನಡೆದಿದ್ದ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕ್ಲೀನ್ ಸ್ವೀಪ್ ಸೋಲಿನ ಬಳಿಕ ತಂಡ ಅದ್ಭುತವಾಗಿ ಕಮ್ ಬ್ಯಾಕ್ ಮಾಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು.
ಆದರೆ ಎರಡನೇ ಟೆಸ್ಟ್ ಪಂದ್ಯದಲ್ಲಿ ಆ ಗೌರವವೆಲ್ಲಾ ಕಳೆದುಹೋಯಿತು. ಮತ್ತೆ ಕಿವೀಸ್ ವಿರುದ್ಧದ ಸರಣಿಯಲ್ಲಿ ಮಾಡಿದ ತಪ್ಪುಗಳೇ ಪುನರಾವರ್ತನೆಯಾಗಿದೆ. ಬ್ಯಾಟಿಗರು ಎರಡೂ ಇನಿಂಗ್ಸ್ ಗಳಲ್ಲಿ ಕೈ ಕೊಟ್ಟಿದ್ದೇ ಟೀಂ ಇಂಡಿಯಾ ಸೋಲಿಗೆ ಕಾರಣವಾಗಿದೆ. ಅದರಲ್ಲೂ ವಿಶೇಷವಾಗಿ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ತಂಡಕ್ಕೆ ದುಬಾರಿಯಾಗುತ್ತಿದ್ದಾರೆ.
ಎರಡನೇ ಇನಿಂಗ್ಸ್ ನಲ್ಲಿ ಭಾರತ 157 ರನ್ ಗಳ ಹಿನ್ನಡೆಯೊಂದಿಗೆ ಇನಿಂಗ್ಸ್ ಆರಂಭಿಸಿ 175 ರನ್ ಗಳಿಗೆ ಆಲೌಟ್ ಆಗಿತ್ತು. ಕೇವಲ 19 ರನ್ ಗಳ ಗೆಲುವಿನ ಗುರಿ ತಲುಪುವುದು ಆಸೀಸ್ ಗೆ ಕಷ್ಟವೇ ಆಗಲಿಲ್ಲ. ವಿಪರ್ಯಾಸವೆಂದರೆ ಈ ಪಂದ್ಯದಲ್ಲಿ ಟೀಂ ಇಂಡಿಯಾ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡಿತ್ತು. ಯಾಕೋ ಇತ್ತೀಚೆಗಿನ ದಿನಗಳಲ್ಲಿ ನಾಯಕ ರೋಹಿತ್ ಶರ್ಮಾ ಟಾಸ್ ನಿಂದಲೇ ಎಡವುತ್ತಿದ್ದಾರೆ. ಕಿವೀಸ್ ಸರಣಿಯಲ್ಲೂ ಇದೇ ತಪ್ಪು ಮಾಡಿದ್ದರು. ಈಗ ಇಲ್ಲಿಯೂ ಅದನ್ನೇ ಮಾಡುತ್ತಿದ್ದಾರೆ. ಟೀಂ ಇಂಡಿಯಾ ಟೆಸ್ಟ್ ಫಾರ್ಮ್ಯಾಟ್ ನಲ್ಲಿ ಪ್ರಬಲ ತಂಡ. ಆದರೆ ಘಟಾನುಘಟಿ ಆಟಗಾರರಿದ್ದರೂ ಇತ್ತೀಚೆಗೆ ನೀಡುತ್ತಿರುವ ಪ್ರದರ್ಶನ ಎಲ್ಲರ ನಿರಾಸೆಗೆ ಕಾರಣವಾಗಿದೆ.