ವಿಶಾಖಪಟ್ಟಣಂ: ಭಾರತ ಮತ್ತು ಇಂಗ್ಲೆಂಡ್ ನಡುವೆ ಇಂದಿನಿಂದ ವಿಶಾಖಪಟ್ಟಣಂನಲ್ಲಿ ದ್ವಿತೀಯ ಟೆಸ್ಟ್ ಪಂದ್ಯ ಆರಂಭವಾಗುತ್ತಿದೆ.
ಮೊದಲ ಟೆಸ್ಟ್ ಪಂದ್ಯ ಸೋತ ಟೀಂ ಇಂಡಿಯಾ ಈ ಪಂದ್ಯವನ್ನು ಗೆದ್ದು ಪ್ರತಿಷ್ಠೆ ಉಳಿಸಿಕೊಳ್ಳುವ ಧಾವಂತದಲ್ಲಿದೆ. ಆದರೆ ಪ್ರಮುಖ ಆಟಗಾರರ ಅನುಪಸ್ಥಿತಿ ರೋಹಿತ್ ಪಡೆಗೆ ದೊಡ್ಡ ಹೊಡೆತ ನೀಡಿದೆ. ಕಳೆದ ಪಂದ್ಯದಲ್ಲಿ ಇನಿಂಗ್ಸ್ ಮುನ್ನಡೆ ಅನುಭವಿಸಿಯೂ ಎರಡನೇ ಇನಿಂಗ್ಸ್ ನಲ್ಲಿ ಬ್ಯಾಟಿಂಗ್, ಬೌಲಿಂಗ್ ನಲ್ಲಿ ವಿಫಲವಾದ ಟೀಂ ಇಂಡಿಯಾ ಸೋಲು ಕಾಣಬೇಕಾಯಿತು.
ಸ್ಪಿನ್ ಬೌಲಿಂಗ್ ಪ್ರಯೋಗಕ್ಕೆ ಮುಂದಾದ ಇತ್ತಂಡಗಳು
ಆದರೆ ಅತ್ತ ಇಂಗ್ಲೆಂಡ್ ಸ್ಪಿನ್ನರ್ ಗಳ ಬಲದಿಂದಲೇ ಗೆದ್ದುಬೀಗಿತ್ತು. ಈ ಸರಣಿಗೆ ತಕ್ಕ ಯೋಜನೆ ರೂಪಿಸಿಕೊಂಡೇ ಬಂದಿರುವ ಇಂಗ್ಲೆಂಡ್ ಸ್ಪಿನ್ನರ್ ಗಳ ಪಡೆಯನ್ನೇ ಕಟ್ಟಿಕೊಂಡು ಬಂದಿದೆ. ಹೀಗಾಗಿ ಭಾರತವೂ ಸ್ಪಿನ್ ಅಸ್ತ್ರದ ಮೊರೆ ಹೋಗಲಿದೆ. ಈ ಪಂದ್ಯಕ್ಕೆ ಎರಡೂ ತಂಡಗಳೂ ಎಂದೂ ಮಾಡದ ಪ್ರಯೋಗ ನಡೆಸುವ ಸಾಧ್ಯತೆಯಿದೆ. ಎರಡೂ ತಂಡಗಳೂ ನಾಲ್ವರನ್ನು ಸ್ಪಿನ್ನರ್ ಗಳೊಂದಿಗೆ ಕಣಕ್ಕಿಳಿಯುವ ಸಾಧ‍್ಯತೆಯಿದೆ.
ರೋಹಿತ್ ಶರ್ಮಾಗೆ ಸತ್ವಪರೀಕ್ಷೆ
ಮೊದಲ ಟೆಸ್ಟ್ ಸೋಲಿನ ಬಳಿಕ ನಾಯಕನಾಗಿ ಮತ್ತು ಆಟಗಾರನಾಗಿ ರೋಹಿತ್ ಶರ್ಮಾ ಎಲ್ಲರ ಟೀಕೆಗೆ ಗುರಿಯಾಗಿದ್ದರು. ಇದೀಗ ಕೆಎಲ್ ರಾಹುಲ್, ಜಡೇಜಾ, ಕೊಹ್ಲಿಯಂತಹ ಪ್ರಮುಖರ ಅನುಪಸ್ಥಿತಿಯಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿದ್ದಾರೆ. ಈಗಾಗಲೇ ಅವರ ನಾಯಕತ್ವದ ಬಗ್ಗೆ ಪ್ರಶ್ನೆ ಎದ್ದಿದೆ. ಇಂದು ಸೋತರೆ ರೋಹಿತ್ ನಾಯಕತ್ವಕ್ಕೇ ಕುತ್ತು ಬಂದರೂ ಅಚ್ಚರಿಯಿಲ್ಲ.
ಅತ್ತ ಇಂಗ್ಲೆಂಡ್ ಗೂ ಜ್ಯಾಕ್ ಲೀಚ್ ಅನುಪಸ್ಥಿತಿ ಕಾಡಲಿದೆ. ಹಾಗಿದ್ದರೂ ಕಳೆದ ಪಂದ್ಯದಲ್ಲಿ ಯುವ ಸ್ಪಿನ್ನರ್ ಹಾರ್ಟ್ಲೀ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಜೊತೆಗೆ ಬ್ಯಾಟಿಂಗ್ ನಲ್ಲಿ ದೊಡ್ಡ ಮೊತ್ತ ಪೇರಿಸದೇ ಇದ್ದರೂ ಜೋ ರೂಟ್ ಬೌಲಿಂಗ್ ನಲ್ಲಿ ಕಮಾಲ್ ಮಾಡಿದ್ದರು. ಆ ಮೂಲಕ ಸ್ಪಿನ್ ಪಿಚ್ ನಿರ್ಮಿಸಿದರೂ ನಮ್ಮ ಬಳಿ ಬಾಣಗಳಿವೆ ಎಂದು ಭಾರತಕ್ಕೆ ಎಚ್ಚರಿಕೆ ನೀಡಿತ್ತು. ಹೀಗಾಗಿ ಈ ಪಂದ್ಯದಲ್ಲೂ ಪೈಪೋಟಿ ನಿರೀಕ್ಷಿಸಬಹುದು. ಪಂದ್ಯ 9.30 ಕ್ಕೆ ಆರಂಭವಾಗಲಿದ್ದು, ಜಿಯೋ ಸಿನಿಮಾ ಆಪ್ ನಲ್ಲಿ ನೇರ ಪ್ರಸಾರ ವೀಕ್ಷಿಸಬಹುದು.