ವಿಶಾಖಪಟ್ಟಣ: ಇಂಗ್ಲೆಂಡ್ ವಿರುದ್ಧ ನಾಳೆಯಿಂದ ನಡೆಯಲಿರುವ ದ್ವಿತೀಯ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾ ಆಟಗಾರರು ಕಠಿಣ ಅಭ್ಯಾಸ ನಡೆಸಿದ್ದಾರೆ.
ಮೊದಲ ಟೆಸ್ಟ್ ಪಂದ್ಯ ಸೋತಿರುವುದರಿಂದ ಟೀಂ ಇಂಡಿಯಾಗೆ ಈಗ ಎರಡನೇ ಟೆಸ್ಟ್ ಪಂದ್ಯ ಗೆಲ್ಲುವುದು ಪ್ರತಿಷ್ಠೆಯ ವಿಚಾರವಾಗಿದೆ. ಇದರ ನಡುವೆ ಪ್ರಮುಖರ ಅನುಪಸ್ಥಿತಿಯೂ ಇರುವುದರಿಂದ ರೋಹಿತ್ ಪಡೆ ಒತ್ತಡದಲ್ಲಿದೆ. ನಿನ್ನೆಯಿಂದ ವಿಶಾಖಪಟ್ಟಣಂ ಮೈದಾನದಲ್ಲಿ ರೋಹಿತ್ ಪಡೆ ಕಠಿಣ ಅಭ್ಯಾಸ ನಡೆಸುತ್ತಿದೆ. ಅದರಲ್ಲೂ ವಿಶೇಷವಾಗಿ ಬ್ಯಾಟಿಗರು ಸ್ಪಿನ್ ಅಸ್ತ್ರ ಎದುರಿಸಲು ಸಿದ್ಧತೆ ನಡೆಸುತ್ತಿದ್ದಾರೆ.
ಸ್ವೀಪ್ ಟೆಕ್ನಿಕ್ ಕಲಿಯುತ್ತಿರುವ ಟೀಂ ಇಂಡಿಯಾ ಆಟಗಾರರು
ಕಳೆದ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಆಟಗಾರರು ಎದುರಾಳಿಗಳನ್ನು ಸ್ಪಿನ್ ಅಸ್ತ್ರದಿಂದ ಕಟ್ಟಿ ಹಾಕಲು ಯೋಜನೆ ರೂಪಿಸಿದ್ದರು. ಆದರೆ ಇಂಗ್ಲೆಂಡ್ ಇದಕ್ಕೆ ತಕ್ಕ ಸಿದ್ಧತೆ ನಡೆಸಿಕೊಂಡೇ ಬಂದಿತ್ತು. ಇಂಗ್ಲೆಂಡ್ ಬ್ಯಾಟಿಗರು ಟೀಂ ಇಂಡಿಯಾ ಸ್ಪಿನ್ನರ್ ಗಳ ಮುಂದೆ ಸ್ವೀಪ್ ಮಾಡಿಯೇ ರನ್ ಕದಿಯುತ್ತಿದ್ದರು. ಇದರಿಂದ ಗಲಿಬಿಲಿಗೊಂಡ ಭಾರತದ ಸ್ಪಿನ್ನರ್ ಗಳು ಕೈ ಚೆಲ್ಲಿ ಕೂರುವಂತಾಗಿತ್ತು.
ಹೀಗಾಗಿ ಈ ಪಂದ್ಯದಲ್ಲಿ ಟೀಂ ಇಂಡಿಯಾವೂ ಅದೇ ಅಸ್ತ್ರ ಬಳಕೆ ಮಾಡಲು ತೀರ್ಮಾನಿಸಿದೆ. ಟೀಂ ಇಂಡಿಯಾ ಬ್ಯಾಟಿಗರು ಅಭ್ಯಾಸದ ವೇಳೆ ಬ್ಯಾಟ್ ಸ್ವೀಪ್ ಮಾಡುವ ತಂತ್ರ ಕಲಿಯುತ್ತಿದ್ದುದು ಗಮನಕ್ಕೆ ಬಂದಿದೆ. ವಿಶೇಷವಾಗಿ ಶುಬ್ಮನ್ ಗಿಲ್ ಸ್ಪಿನ್ನರ್ ಗಳ ಮುಂದೆ ತಡಬಡಾಯಿಸಿದ್ದು, ವಿಶೇಷವಾಗಿ ಸ್ಪಿನ್ ಬೌಲಿಂಗ್ ಗೆ ಅಭ್ಯಾಸ ನಡೆಸಿದ್ದಾರೆ.
ನಾಳೆಯಿಂದ ಎರಡನೇ ಟೆಸ್ಟ್ ಪಂದ್ಯ ಆರಂಭವಾಗುತ್ತಿದ್ದು, ಇದೂ ಕೂಡಾ ಸ್ಪಿನ್ ಪಿಚ್ ಆಗಿರಲಿದೆ. ಹೀಗಾಗಿ ಎರಡೂ ತಂಡಗಳೂ ನಾಲ್ವರು ಸ್ಪಿನ್ ಮತ್ತು ಏಕೈಕ ವೇಗಿಯೊಂದಿಗೆ ಕಣಕ್ಕಿಳಿಯುವ ಸಾಧ‍್ಯತೆಯಿದೆ. ಟೆಸ್ಟ್ ಕ್ರಿಕೆಟ್ ಮಟ್ಟಿಗೆ ಇದೊಂದು ವಿಶೇಷ ದಾಖಲೆಯಾಗಲಿದೆ.