IND vs ENG test: ಬುಮ್ರಾ, ಧ್ರುವ್ ಭರ್ಜರಿ ಬ್ಯಾಟಿಂಗ್, ಟೀಂ ಇಂಡಿಯಾ 445

Krishnaveni K

ಶುಕ್ರವಾರ, 16 ಫೆಬ್ರವರಿ 2024 (13:43 IST)
Photo Courtesy: Twitter
ರಾಜ್ ಕೋಟ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯದಲ್ಲಿ ಧ‍್ರುವ ಜ್ಯುರೆಲ್ ಮತ್ತು ಜಸ್ಪ್ರೀತ್ ಬುಮ್ರಾ ಭರ್ಜರಿ ಬ್ಯಾಟಿಂಗ್ ನಡೆಸಿದ್ದು ಟೀಂ ಇಂಡಿಯಾ ಮೊದಲ ಇನಿಂಗ್ಸ್ ನಲ್ಲಿ 445 ರನ್ ಗಳಿಗೆ ಆಲೌಟ್ ಆಗಿದೆ.

ಇಂದು ಯುವ ವಿಕೆಟ್ ಕೀಪರ್ ಬ್ಯಾಟಿಗ ಧ್ರುವ್ ಜ್ಯುರೆಲ್, ರವಿಚಂದ್ರನ್ ಅಶ್ವಿನ್ ಮತ್ತು ಕೊನೆಯಲ್ಲಿ ಜಸ್ಪ್ರೀತ್ ಬುಮ್ರಾ ಮಿಂಚಿದ್ದು ಹೈಲೈಟ್ ಆಗಿತ್ತು. ನಿನ್ನೆ 5 ವಿಕೆಟ್ ನಷ್ಟಕ್ಕೆ 326 ರನ್ ಗಳಿಸಿ ದಿನದಾಟ ಮುಗಿಸಿದ್ದ ಭಾರತ ಇಂದು ರನ್ ಗಳಿಸಿ ಆಲೌಟ್ ಆಗಿದೆ. ನಿನ್ನೆ ಅಜೇಯರಾಗುಳಿದಿದ್ದ ರವೀಂದ್ರ ಜಡೇಜಾ 112 ರನ್ ಗಳಿಸಿ ಔಟಾದರು. ಅವರ ಬೆನ್ನಲ್ಲೇ ಕುಲದೀಪ್ ಯಾದವ್ ಕೂಡಾ 4 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.

ಬಳಿಕ ಜೊತೆಯಾದ ರವಿಚಂದ್ರನ್ ಅಶ್ವಿನ್ ಮತ್ತು ಧ್ರುವ್ ಜ್ಯುರೆಲ್ ಜೋಡಿ ಅರ್ಧಶತಕದ ಜೊತೆಯಾಟವಾಡಿ ತಂಡದ ಮೊತ್ತವನ್ನು 400 ಕ್ಕೆ ತಲುಪಿಸಿದರು. ಅಶ್ವಿನ್ 37 ರನ್ ಗಳಿಸಿ ಔಟಾದರೆ ಚೊಚ್ಚಲ ಪಂದ್ಯವಾಡುತ್ತಿರುವ ಧ್ರುವ್ 46 ರನ್ ಗಳಿಸಿ ಔಟಾಗುವ ಮೂಲಕ ಮೊದಲ ಪಂದ್ಯದಲ್ಲಿ ಅರ್ಧಶತಕ ಗಳಿಸುವ ಅವಕಾಶ ಮಿಸ್ ಮಾಡಿಕೊಂಡರು. ಅವರ ಈ ಇನಿಂಗ್ಸ್ ನಲ್ಲಿ 3 ಸಿಕ್ಸರ್ ಕೂಡಾ ಸೇರಿತ್ತು.

ಕೊನೆಯಲ್ಲಿ ಬ್ಯಾಟಿಂಗ್ ಗಿಳಿದ ಜಸ್ಪ್ರೀತ್ ಬುಮ್ರಾ ಬಿರುಸಿನ ರನ್ ಗಳಿಸಿದರು. ಒಟ್ಟು 28 ಎಸೆತ ಎದುರಿಸಿದ ಬುಮ್ರಾ ಒಂದು ಸಿಕ್ಸರ್ ಸಹಿತ 26 ರನ್ ಗಳಿಸಿ ಕೊನೆಯವರಾಗಿ ಔಟಾದರು. ಮೊಹಮ್ಮದ್ ಸಿರಾಜ್ 3 ರನ್ ಗಳಿಸಿ ಅಜೇಯರಾಗುಳಿದರು. ಇಂಗ್ಲೆಂಡ್ ಪರ ಮಾರ್ಕ್ ವುಡ್ 4, ರೆಹಾನ್ ಅಹ್ಮದ್ 2, ಜೋ ರೂಟ್, ಜೇಮ್ಸ್ ಆಂಡರ್ಸನ್, ಟಾಮ್ ಹಾರ್ಟ್ಲೀ ತಲಾ 1 ವಿಕೆಟ್ ಕಬಳಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ