ರಾಜ್ ಕೋಟ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ಟೀಂ ಇಂಡಿಯಾ ಭೋಜನ ವಿರಾಮದ ವೇಳೆಗೆ ಮೊದಲ ಇನಿಂಗ್ಸ್ ನಲ್ಲಿ 7 ವಿಕೆಟ್ ನಷ್ಟಕ್ಕೆ 388 ರನ್ ಗಳಿಸಿದೆ.
ನಿನ್ನೆ ಅಜೇಯರಾಗುಳಿದಿದ್ದ ಶತಕ ಧಾರಿ ರವೀಂದ್ರ ಜಡೇಜಾ ಇಂದು 112 ರನ್ ಗಳಿಗೆ ವಿಕೆಟ್ ಒಪ್ಪಿಸಿದರು. ಅದಾದ ಬಳಿಕ ಜೊತೆಯಾದ ರವಿಚಂದ್ರನ್ ಅಶ್ವಿನ್-ಧ‍್ರುವ ಜ್ಯುರೆಲ್ ಜೋಡಿ 57 ರನ್ ಗಳ ಜೊತೆಯಾಟವಾಡಿದ್ದು, ಭಾರತವನ್ನು 400 ರ ಗಡಿ ತಲುಪಿಸಿದೆ.
ಚೊಚ್ಚಲ ಪಂದ್ಯವಾಡುತ್ತಿರುವ ವಿಕೆಟ್ ಕೀಪರ್ ಬ್ಯಾಟಿಗ ಧ್ರುವ ಜ್ಯುರೆಲ್ ಇದುವರೆಗೆ 71 ಎಸೆತ ಎದುರಿಸಿದ್ದು 1 ಸಿಕ್ಸರ್, 2 ಬೌಂಡರಿ ಸಹಿತ 31 ರನ್ ಗಳಿಸಿ ಆಡುತ್ತಿದ್ದಾರೆ. ಅವರಿಗೆ ತಕ್ಕ ಸಾಥ್ ನೀಡುತ್ತಿರುವ ಹಿರಿಯ ಆಲ್ ರೌಂಡರ್ ರವಿಚಂದ್ರನ್ ಅಶ್ವಿನ್ 25 ರನ್ ಗಳಿಸಿದ್ದಾರೆ.
ನಿನ್ನೆಯ ದಿನ ಚೊಚ್ಚಲ ಪಂದ್ಯವಾಡಿದ್ದ ಸರ್ಫರಾಜ್ ಖಾನ್ ಅರ್ಧಶತಕ ಗಳಿಸಿ ಮಿಂಚಿದ್ದರು. ಇಂದು ಧ್ರುವ ಜ್ಯುರೇಲ್ ಸರದಿ. ತಮಗೆ ಸಿಕ್ಕ ಅವಕಾಶವನ್ನು ಬಳಸಿಕೊಳ್ಳುತ್ತಿರುವ ಧ್ರುವ ಇದೀಗ ಚೊಚ್ಚಲ ಪಂದ್ಯದಲ್ಲಿಯೇ ಮೊದಲ ಅರ್ಧಶತಕದತ್ತ ಸಾಗಿದ್ದಾರೆ. ಒಂದು ಹಂತದಲ್ಲಿ ಧ‍್ರುವ ಸಿಕ್ಸರ್ ಸಿಡಿಸಿದಾಗ ಪೆವಿಲಿಯನ್ ನಲ್ಲಿ ಕೂತಿದ್ದ ರೋಹಿತ್ ಶರ್ಮಾ ಚಪ್ಪಾಳೆ ತಟ್ಟಿ ಖುಷಿಪಟ್ಟಿದ್ದು ಕಂಡುಬಂತು. ಈ ಪಂದ್ಯದಲ್ಲಿ ತಾವು ಅವಕಾಶ ನೀಡಿದ ಇಬ್ಬರೂ ಯುವ ಆಟಗಾರರು ಅದನ್ನು ಸರಿಯಾಗಿ ಬಳಸಿಕೊಂಡಿದ್ದು ನಾಯಕನ ಖುಷಿಗೆ ಕಾರಣವಾಗಿದೆ.
ಇಂದು ರವೀಂದ್ರ ಜಡೇಜಾ ಹೊರತುಪಡಿಸಿ ಕುಲದೀಪ್ ಯಾದವ್ ವಿಕೆಟ್ ಪಡೆಯಲು ಇಂಗ್ಲೆಂಡ್ ಸಫಲವಾಗಿದೆ. ಕುಲದೀಪ್ 4 ರನ್ ಗಳಿಸಿ ಔಟಾದರು. ಜಡೇಜಾ ವಿಕೆಟ್ ಜೋ ರೂಟ್ ಪಾಲಾದರೆ ಕುಲದೀಪ್ ವಿಕೆಟ್ ನ್ನು ಅನುಭವಿ ವೇಗಿ ಜೇಮ್ಸ್ ಆಂಡರ್ಸನ್ ತಮ್ಮದಾಗಿಸಿಕೊಂಡರು.