ಭಾರತ-ಆಸ್ಟ್ರೇಲಿಯಾ ಟಿ20 ಪಂದ್ಯಕ್ಕೆ ಮಳೆ ಅಡ್ಡಿ: ಆದರೆ ಈ ಬಾರಿ ಟೀಂ ಇಂಡಿಯಾ ಬಚಾವ್!
ಶುಕ್ರವಾರ, 23 ನವೆಂಬರ್ 2018 (15:51 IST)
ಮೆಲ್ಬೋರ್ನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ದ್ವಿತೀಯ ಟಿ20 ಪಂದ್ಯಕ್ಕೆ ಮಳೆ ಅಡ್ಡಿಯಾಗಿದ್ದು, ಪಂದ್ಯವನ್ನು 19 ಓವರ್ ಗಳಿಗೆ ಕಡಿತಗೊಳಿಸಲಾಗಿದೆ.
ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 19 ಓವರ್ ಗಳಲ್ಲಿ 132 ರನ್ ಗಳಿಸಿದ್ದಾಗ ಮಳೆಯಿಂದಾಗಿ ಆಟ ಸ್ಥಗಿತಗೊಂಡಿತು. ಹೀಗಾಗಿ ಆಟವನ್ನು 19 ಓವರ್ ಗೆ ಸೀಮಿತಗೊಳಿಸಿದ್ದು ಡಕ್ ವರ್ತ್ ಲೂಯಿಸ್ ನಿಯಮದ ಪ್ರಕಾರ ಗೆಲುವಿಗೆ ಭಾರತ 137 ರನ್ ಗಳಿಸಬೇಕಿದೆ.
ಮೊದಲ ಪಂದ್ಯದಲ್ಲೂ ಮಳೆಯಿಂದಾಗಿ ಡಕ್ ವರ್ತ್ ಲೂಯಿಸ್ ನಿಯಮದ ಪ್ರಕಾರ ಆಟವನ್ನು 17 ರನ್ ಗೆ ಕಡಿತಗೊಳಿಸಲಾಗಿತ್ತು. ಆದರೆ ಭಾರತ ಆ ಪಂದ್ಯದಲ್ಲಿ 174 ರನ್ ಗಳ ಬೃಹತ್ ಮೊತ್ತ ಪೇರಿಸಬೇಕಾಗಿ ಬಂದಿತ್ತು. ಆದರೆ ಈ ಪಂದ್ಯದಲ್ಲಿ ಆರಂಭದಿಂದಲೂ ಆಸ್ಟ್ರೇಲಿಯಾ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ್ದಲ್ಲದೆ, ನಿಧಾನಗತಿಯಲ್ಲಿ ರನ್ ಪೇರಿಸಿದ್ದರಿಂದ ಭಾರತಕ್ಕೆ ದೊಡ್ಡ ಮೊತ್ತದ ಗುರಿ ಸಿಗಲಿಲ್ಲ.
ಈ ಪಂದ್ಯದಲ್ಲಿ ಆರಂಭದಿಂದಲೂ ಬಿಗುವಿನ ದಾಳಿ ಸಂಘಟಿಸಿದ ಬೌಲರ್ ಗಳು ಸಾಂಘಿಕ ಹೋರಾಟ ಪ್ರದರ್ಶಿಸಿದರು. ಭುವನೇಶ್ವರ್ ಕುಮಾರ್ ಮತ್ತು ಖಲೀಲ್ ಅಹಮ್ಮದ್ ತಲಾ 2 ವಿಕೆಟ್, ಬುಮ್ರಾ, ಕುಲದೀಪ್ ಯಾದವ್ ಮತ್ತು ಕೃನಾಲ್ ಪಾಂಡ್ಯಗೆ ತಲಾ 1 ವಿಕೆಟ್ ಸಿಕ್ಕಿತು. ಆಸ್ಟ್ರೇಲಿಯಾ ಪರ ಬೆನ್ ಮೆಕ್ ಡೆಮೊಟ್ 32 ರನ್ ಸಿಡಿಸಿ ಅಜೇಯರಾಗುಳಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.