ಪರ್ಲ್: ಭಾರತ ಮತ್ತು ದ.ಆಫ್ರಿಕಾ ನಡುವೆ ಇಂದು ಮೂರು ಪಂದ್ಯಗಳ ಏಕದಿನ ಸರಣಿಯ ಕೊನೆಯ ಪಂದ್ಯ ನಡೆಯಲಿದೆ. ಉಭಯ ತಂಡಗಳಿಗೂ ಇದು ನಿರ್ಣಾಯಕ ಪಂದ್ಯವಾಗಲಿದೆ.
ಮೊದಲ ಪಂದ್ಯವನ್ನು ಟೀಂ ಇಂಡಿಯಾ 8 ವಿಕೆಟ್ ಗಳಿಂದ ಗೆದ್ದುಕೊಂಡರೆ ಎರಡನೇ ಪಂದ್ಯದಲ್ಲಿ 8 ವಿಕೆಟ್ ಗಳ ಸೋಲು ಅನುಭವಿಸಿತ್ತು. ಹೀಗಾಗಿ ಇದೀಗ ಮೂರನೇ ಪಂದ್ಯ ನಿರ್ಣಾಯಕವಾಗಲಿದೆ.
ಕಳೆದ ಎರಡು ಪಂದ್ಯಗಳನ್ನು ಗಮನಿಸಿದರೆ ಇಲ್ಲಿ ಟಾಸ್ ನಿರ್ಣಾಯಕವಾಗುತ್ತಿದೆ. ಎರಡೂ ಪಂದ್ಯಗಳಲ್ಲಿ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಮಾಡಿದ ತಂಡ ಗೆದ್ದಿದೆ. ಹೀಗಾಗಿ ಇಂದಿನ ಪಂದ್ಯದಲ್ಲೂ ಟಾಸ್ ನಿರ್ಣಾಯಕವಾಗುವ ನಿರೀಕ್ಷೆಯಿದೆ.
ಟೀಂ ಇಂಡಿಯಾ ಪರ ಆರಂಭಿಕ ಋತುರಾಜ್ ಗಾಯಕ್ ವಾಡ್ ಕಳೆದ ಎರಡೂ ಪಂದ್ಯಗಳಲ್ಲಿ ವಿಫಲರಾಗಿದ್ದಾರೆ. ಹಾಗಿದ್ದರೂ ಅವರಿಗೆ ಮತ್ತೊಂದು ಅವಕಾಶ ಸಿಗುವ ಸಾಧ‍್ಯತೆಯಿದೆ. ಯುವ ಬ್ಯಾಟಿಗ ಸಾಯಿ ಸುದರ್ಶನ್ ಕಳೆದ ಎರಡೂ ಪಂದ್ಯಗಳಲ್ಲಿ ಅರ್ಧಶತಕ ಸಿಡಿಸಿ ಉತ್ತಮ ಫಾರ್ಮ್ ನಲ್ಲಿದ್ದಾರೆ. ತಿಲಕ್ ವರ್ಮ, ಸಂಜು ಸ್ಯಾಮ್ಸನ್ ಸಿಕ್ಕ ಅವಕಾಶವನ್ನು ಬಳಸಿಕೊಂಡಿಲ್ಲ. ಬೌಲಿಂಗ್ ನಲ್ಲಿ ಬದಲಾವಣೆ ಸಾಧ‍್ಯತೆಯಿಲ್ಲ. ನಾಯಕರಾಗಿ ಕೆಎಲ್ ರಾಹುಲ್ ಗೆ ಈ ಸರಣಿ ಗೆಲ್ಲುವುದು ಅವರ ಭವಿಷ್ಯದ ದೃಷ್ಟಿಯಿಂದ ಮಹತ್ವದ್ದಾಗಲಿದೆ. ಈ ಪಂದ್ಯ ಭಾರತೀಯ ಕಾಲಮಾನ ಪ್ರಕಾರ ಸಂಜೆ 4.30 ಕ್ಕೆ ಆರಂಭವಾಗಲಿದೆ.