ಕೋಲ್ಕೊತ್ತಾ: ಐಪಿಎಲ್ 2023 ರ ಕೋಲ್ಕೊತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೀನಾಯವಾಗಿ 81 ರನ್ ಗಳಿಂದ ಸೋಲೊಪ್ಪಿಕೊಂಡಿದೆ.
ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 207 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಆರ್ ಸಿಬಿ ಕೇವಲ 17.4 ಓವರ್ ಗಳಲ್ಲಿ 123 ರನ್ ಗಳಿಗೆ ಆಲೌಟ್ ಆಯಿತು.
ಈ ಪಂದ್ಯದಲ್ಲಿ ಬಿರುಸಿನ ಆಟವಾಡಿದ ಶ್ರಾದ್ಧೂಲ್ ಠಾಕೂರ್ ಕೇವಲ 29 ಎಸೆತಗಳಿಂದ 68 ರನ್ ಚಚ್ಚಿದರು. ಒಂದು ಹಂತದಲ್ಲಿ 89 ರನ್ ಗಳಿಗೆ 5 ವಿಕೆಟ್ ಕಳೆದುಕೊಂಡಿದ್ದ ಕೆಕೆಆರ್ ಗೆ ಠಾಕೂರ್ ಇನಿಂಗ್ಸ್ ಟರ್ನಿಂಗ್ ಪಾಯಿಂಟ್ ಆಯಿತು. ಆರ್ ಸಿಬಿ ಈ ಬ್ಯಾಟಿಗನ ಸಿಡಿಲಬ್ಬರಕ್ಕೆ ಕಡಿವಾಣ ಹಾಕಲು ಸೋತಿತು.
ಆರ್ ಸಿಬಿ ಸೋಲಿಗೆ ಕಾರಣವಾದ ಇನ್ನೊಂದು ಅಂಶವೆಂದರೆ ಬ್ಯಾಟಿಂಗ್ ವೈಫಲ್ಯ. ವಿರಾಟ್ ಕೊಹ್ಲಿ (21), ಫಾ ಡು ಪ್ಲೆಸಿಸ್ (23) ಉತ್ತಮ ಆರಂಭ ಪಡೆದರೂ ಅದನ್ನು ದೊಡ್ಡ ಮೊತ್ತವಾಗಿಸಲು ವಿಫಲರಾದರು. ಬಳಿಕ ಉಳಿದೆಲ್ಲಾ ಬ್ಯಾಟಿಗರು 20 ರ ಗಡಿಯನ್ನೂ ದಾಟಲು ವಿಫಲರಾದರು.
ಈ ಪಂದ್ಯದಲ್ಲಿ ಕೆಕೆಆರ್ ಗೆಲುವಿಗೆ ಕಾರಣವಾಗಿದ್ದು ಸ್ಪಿನ್ನರ್ ಗಳು. 10 ವಿಕೆಟ್ ಗಳ ಪೈಕಿ 9 ವಿಕೆಟ್ ಗಳು ಸ್ಪಿನ್ನರ್ ಗಳ ಪಾಲಾಯಿತು. ವರುಣ್ ಚಕ್ರವರ್ತಿ 4, ಸುಯಾಶ್ ಶರ್ಮಾ 3, ಸುನಿಲ್ ನರೈನ್ 2 ವಿಕೆಟ್ ಕಬಳಿಸಿದರು. ಸ್ಪಿನ್ನರ್ ಗಳ ಎದುರು ಆರ್ ಸಿಬಿ ತಡಬಡಾಯಿಸಿದ್ದು, ಅನಗತ್ಯ ಹೊಡೆತಗಳಿಗೆ ಕೈ ಹಾಕಿದ್ದು ಸೋಲಿಗೆ ಕಾರಣವಾಯಿತು.