ಬೆಂಗಳೂರು: ಐಪಿಎಲ್ 2024 ರಲ್ಲಿ ಇಂದು ಕೋಲ್ಕೊತ್ತಾ ನೈಟ್ ರೈಡರ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪಂದ್ಯವಾಡಲಿದೆ.
ಈ ಪಂದ್ಯದಲ್ಲಿ ಎಲ್ಲರ ಗಮನ ಕೆಕೆಆರ್ ಮೆಂಟರ್ ಗೌತಮ್ ಗಂಭೀರ್ ಮತ್ತು ಆರ್ ಸಿಬಿ ಸ್ಟಾರ್ ಪ್ಲೇಯರ್ ವಿರಾಟ್ ಕೊಹ್ಲಿ ಮೇಲಿರಲಿದೆ. ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ನಡುವಿನ ಮೈದಾನದ ಕಲಹ ಎಲ್ಲರಿಗೂ ಗೊತ್ತೇ ಇದೆ. ಕಳೆದ ವರ್ಷ ಇವರಿಬ್ಬರ ಮೈದಾನದ ಘರ್ಷಣೆ ಸಾಕಷ್ಟು ಸದ್ದು ಮಾಡಿತ್ತು.
ಆಗ ಗಂಭೀರ್ ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿಯಲ್ಲಿದ್ದರು. ಆದರೆ ಈ ಬಾರಿ ಕೆಕೆಆರ್ ತಂಡದ ಮೆಂಟರ್ ಆಗಿದ್ದಾರೆ. ಕಳೆದ ವರ್ಷ ನವೀನ್ ಉಲ್ ಹಕ್ ಜೊತೆಗೆ ಕೊಹ್ಲಿ ಸ್ಲೆಡ್ಜಿಂಗ್ ಮಾಡಿದ್ದನ್ನು ಗಂಭೀರ್ ಮೈದಾನದಲ್ಲಿಯೇ ಪ್ರಶ್ನಿಸಿದ್ದರು. ಇಬ್ಬರ ನಡುವೆ ವಾಗ್ವಾದವೇ ನಡೆದಿತ್ತು. ಆರ್ ಸಿಬಿ ವಿರುದ್ಧ ಪಂದ್ಯ ಗೆದ್ದಾಗ ಗಂಭೀರ್ ಪ್ರೇಕ್ಷಕರ ಕಡೆಗೆ ಕೈ ಸನ್ನೆ ಮಾಡಿ ಸುಮ್ಮನಿರುವಂತೆ ಹೇಳಿದ್ದರು. ಅವರ ಈ ಸನ್ನೆ ಆರ್ ಸಿಬಿ ಅಭಿಮಾನಿಗಳನ್ನೂ ಕೆರಳಿಸಿತ್ತು.
ಬಳಿಕ ಬೆಂಗಳೂರಿನಲ್ಲಿ ಲಕ್ನೋ ವಿರುದ್ಧ ಆರ್ ಸಿಬಿ ಗೆದ್ದಾಗ ಅಭಿಮಾನಿಗಳು ತಿರುಗೇಟು ನೀಡಿದ್ದರು. ಇದಾದ ಬಳಿಕ ಗಂಭೀರ್ ಎಲ್ಲೇ ಹೋದರೂ ಕೊಹ್ಲಿ ಅಭಿಮಾನಿಗಳು ಕೊಹ್ಲಿ ಕೊಹ್ಲಿ ಎಂದು ಕೂಗಿ ಮೂದಲಿಸುತ್ತಿದ್ದರು. ಇದೀಗ ಅದೇ ಕೊಹ್ಲಿ ಮತ್ತು ಗಂಭೀರ್ ಮತ್ತೊಮ್ಮೆ ಮುಖಾಮುಖಿಯಾಗುತ್ತಿದ್ದಾರೆ. ಹೀಗಾಗಿ ಇಬ್ಬರ ವರ್ತನೆ ಹೇಗಿರಬಹುದು ಎಂಬ ಕುತೂಹಲವೂ ಅಭಿಮಾನಿಗಳಲ್ಲಿದೆ.