ದೆಹಲಿ: ಐಪಿಎಲ್ 2024 ರಲ್ಲಿ ಇಂದು ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವೆ ನಿರ್ಣಾಯಕ ಪಂದ್ಯ ನಡೆಯಲಿದೆ. ಎರಡೂ ತಂಡಗಳಿಗೆ ಪ್ಲೇ ಆಫ್ ರೇಸ್ ನಲ್ಲುಳಿಯಲು ಇದು ನಿರ್ಣಾಯಕ ಪಂದ್ಯವಾಗಿದೆ.
ಅದರಲ್ಲೂ ವಿಶೇಷವಾಗಿ ಡೆಲ್ಲಿಗೆ ಇದು ಕೊನೆಯ ಲೀಗ್ ಪಂದ್ಯವಾಗಿದೆ. ಈ ಪಂದ್ಯದಲ್ಲಿ ಗೆದ್ದರೆ ಆರ್ ಸಿಬಿಗಿಂತ ನೆಟ್ ರನ್ ರೇಟ್ ನಲ್ಲಿ ಮುಂದಿದ್ದರೆ ಮಾತ್ರ ಪ್ಲೇ ಆಫ್ ಅವಕಾಶವಿರಲಿದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಇದು ಕಷ್ಟವಾಗಿದೆ. ಡೆಲ್ಲಿಗೆ ಕಳೆದ ಪಂದ್ಯದಲ್ಲಿ ನಾಯಕ ರಿಷಬ್ ಪಂತ್ ಅನುಪಸ್ಥಿತಿ ಎದುರಾಗಿತ್ತು. ಈ ಪಂದ್ಯಕ್ಕೆ ರಿಷಬ್ ನಿಷೇಧ ಶಿಕ್ಷೆ ಮುಗಿಸಿ ಕಮ್ ಬ್ಯಾಕ್ ಮಾಡಲಿದ್ದಾರೆ.
ಇದುವರೆಗೆ ಆಡಿದ 13 ಪಂದ್ಯಗಳ ಪೈಕಿ 6 ಗೆಲುವು ಸಂಪಾದಿಸಿರುವ ಡೆಲ್ಲಿ 12 ಅಂಕಗಳೊಂದಿಗೆ 6 ನೇ ಸ್ಥಾನದಲ್ಲಿದೆ. ಆದರೆ ನೆಟ್ ರನ್ ರೇಟ್ ನಲ್ಲಿ ಡೆಲ್ಲಿ ತುಂಬಾ ಹಿಂದಿದೆ. ಇಂದಿನ ಪಂದ್ಯದಲ್ಲಿ ಡೆಲ್ಲಿ ಉತ್ತಮ ಸರಾಸರಿಯಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಆದರೆ ಇದು ತವರು ನೆಲದಲ್ಲಿ ನಡೆಯುವ ಪಂದ್ಯ ಎಂಬುದೊಂದೇ ಡೆಲ್ಲಿಗೆ ಆಶಾಕಿರಣವಾಗಿದೆ.
ಇತ್ತ ಲಕ್ನೋ ಸೂಪರ್ ಜೈಂಟ್ಸ್ ತಂಡ ಡೆಲ್ಲಿಗಿಂತ ಹೆಚ್ಚಿನ ಅವಕಾಶ ಹೊಂದಿದೆ. ಇದುವರೆಗೆ 12 ಪಂದ್ಯಗಳಿಂದ 6 ಗೆಲುವು ಕಂಡಿರುವ ಲಕ್ನೋ 12 ಅಂಕ ಸಂಪಾದಿಸಿದೆ. ಲಕ್ನೋಗೆ ಇನ್ನು ಎರಡು ಲೀಗ್ ಪಂದ್ಯಗಳು ಬಾಕಿಯಿವೆ. ಈ ಎರಡನ್ನೂ ಗೆದ್ದರೆ ಲಕ್ನೋ ಸುಲಭವಾಗಿ ಪ್ಲೇ ಆಫ್ ಹಂತಕ್ಕೇರಲಿದೆ. ಆಗ ಆರ್ ಸಿಬಿ ಹೊರಗುಳಿಯಬೇಕಾಗುತ್ತದೆ. ಇಂದಿನ ಪಂದ್ಯದಲ್ಲಿ ಲಕ್ನೋ ಸೋಲಲಿ ಎಂಬುದೇ ಆರ್ ಸಿಬಿ ಪ್ರಾರ್ಥನೆಯಾಗಿರಲಿದೆ. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗುವುದು.