ಐಪಿಎಲ್ 2024: ನಿರ್ಣಾಯಕ ಹಂತದಲ್ಲಿ ಆರ್ ಸಿಬಿಗೆ ಕೈ ಕೊಟ್ಟ ವಿಲ್ ಜ್ಯಾಕ್ಸ್, ಮ್ಯಾಕ್ಸ್ ವೆಲ್ ಕಮ್ ಬ್ಯಾಕ್ ಸಾಧ್ಯ್ತೆ

Krishnaveni K

ಮಂಗಳವಾರ, 14 ಮೇ 2024 (09:49 IST)
ಬೆಂಗಳೂರು: ಐಪಿಎಲ್ 2024 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇನ್ನು ಒಂದು ಲೀಗ್ ಪಂದ್ಯವಾಡಲಿದ್ದು, ಪ್ಲೇ ಆಫ್ ದೃಷ್ಟಿಯಿಂದ ಈ ಪಂದ್ಯ ಮಹತ್ವದ್ದಾಗಿದೆ. ಆದರೆ ಇದಕ್ಕೆ ಮೊದಲು ಸ್ಟಾರ್ ಕ್ರಿಕೆಟಿಗ ವಿಲ್ ಜ್ಯಾಕ್ಸ್ ಮತ್ತು ರೀಸ್ ಟಾಪ್ಲೇ ತಂಡವನ್ನು ತೊರೆದಿದ್ದಾರೆ.

ಆರ್ ಸಿಬಿ ಸತತ 5 ಗೆಲುವುಗಳನ್ನು ಪಡೆದಿರುವುದಕ್ಕೆ ವಿಲ್ ಜ್ಯಾಕ್ಸ್ ಕೊಡುಗೆಯೂ ಅಪಾರ. ಮಧ್ಯಮ ಕ್ರಮಾಂಕದಲ್ಲಿ ಅವರು ತಂಡಕ್ಕೆ ಆಧಾರವಾಗುತ್ತಾರೆ. ಸ್ಪೋಟಕ ಬ್ಯಾಟಿಗನಾಗಿರುವುದರಿಂದ ತಂಡಕ್ಕೆ ದೊಡ್ಡ ಮೊತ್ತ ನೀಡಲು ಕೊಡುಗೆ ನೀಡುತ್ತಾರೆ. ಆದರೆ ಇದೀಗ ಅವರು ತಂಡವನ್ನು ತೊರೆದಿದ್ದಾರೆ.

ಅವರ ಜೊತೆಗೆ ಇಂಗ್ಲೆಂಡ್ ಮೂಲದ ಮತ್ತೊಬ್ಬ ಕ್ರಿಕೆಟಿಗ ರೀಸ್ ಟಾಪ್ಲೇ ಕೂಡಾ ಆರ್ ಸಿಬಿಯನ್ನು ಅರ್ಧಕ್ಕೇ ತೊರೆದು ತವರಿಗೆ ತೆರಳಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ಸೇರ್ಪಡೆಯಾಗಬೇಕಿರುವುದರಿಂದ ಈ ಇಬ್ಬರೂ ಕ್ರಿಕೆಟಿಗರು ಲೀಗ್ ಹಂತದ ಕೊನೆಯ ಪಂದ್ಯ ಬಾಕಿಯಿರುವಂತೇ ತವರಿಗೆ ತೆರಳಿದ್ದಾರೆ. ಇವರಿಬ್ಬರ ಅನುಪಸ್ಥಿತಿ ತಂಡಕ್ಕೆ ಕಾಡಲಿದೆ.

ಇನ್ನೊಂದೆಡೆ ಮುಂದಿನ ಲೀಗ್ ಪಂದ್ಯವನ್ನು ಉತ್ತಮ ಸರಾಸರಿಯೊಂದಿಗೆ ಗೆಲ್ಲಲೇಬೇಕಿರುವ ಒತ್ತಡದಲ್ಲಿರುವ ಆರ್ ಸಿಬಿಗೆ ಮತ್ತೊಬ್ಬ ಸ್ಟಾರ್ ಕ್ರಿಕೆಟಿಗ ಗ್ಲೆನ್ ಮ್ಯಾಕ್ಸ್ ವೆಲ್ ಕಮ್ ಬ್ಯಾಕ್ ಮಾಡಬಹುದು ಎಂಬ ವಿಶ್ವಾಸದಲ್ಲಿ ಅಭಿಮಾನಿಗಳಿದ್ದಾರೆ. ಮೊದಲ ಕೆಲವು ಪಂದ್ಯವಾಡಿದ್ದ ಮ್ಯಾಕ್ಸಿ ಫಾರ್ಮ್ ನಲ್ಲಿಲ್ಲದ ಕಾರಣ, ಮುಂದಿನ ಕೆಲವು ಪಂದ್ಯಗಳಿಗೆ ತನ್ನನ್ನು ಪರಿಗಣಿಸದಿರುವಂತೆ ಕೇಳಿಕೊಂಡಿದ್ದರು. ಅದರಂತೆ ಅವರು ಕಳೆದ ಕೆಲವು ಪಂದ್ಯಗಳಿಂದ ತಂಡದಲ್ಲಿಯೇ ಇಲ್ಲ. ಆದರೆ ಈಗ ವಿಲ್ ಜ್ಯಾಕ್ಸ್ ಸ್ಥಾನ ತುಂಬಲು ಮ್ಯಾಕ್ಸಿ ಆಗಮನವಾಗಬಹುದು ಎಂಬ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ