ಐಪಿಎಲ್ 2024: ಪಂಜಾಬ್ ಕಿಂಗ್ಸ್ ಎದುರು ಮೊದಲ ಗೆಲುವಿನ ಕನಸಲ್ಲಿ ಆರ್ ಸಿಬಿ

Krishnaveni K

ಸೋಮವಾರ, 25 ಮಾರ್ಚ್ 2024 (14:35 IST)
ಬೆಂಗಳೂರು: ಐಪಿಎಲ್ 2024 ರಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಎರಡನೇ ಪಂದ್ಯವನ್ನು ಪಂಜಾಬ್ ಕಿಂಗ್ಸ್ ವಿರುದ್ಧ ಆಡಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಈ ಪಂದ್ಯ ನಡೆಯಲಿದೆ.

ಚೆನ್ನೈನಲ್ಲಿ ನಡೆದಿದ್ದ ಉದ್ಘಾಟನಾ ಪಂದ್ಯದಲ್ಲಿ ಆರ್ ಸಿಬಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋಲು ಅನುಭವಿಸಿತ್ತು. ಆದರೆ ಇದೀಗ ಪಂಜಾಬ್ ವಿರುದ್ಧ ಮೊದಲ ಗೆಲುವು ದಾಖಲಿಸುವ ವಿಶ್ವಾಸದಲ್ಲಿದೆ. ಪಂಜಾಬ್ ಕಳೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆದ್ದಿತ್ತು. ಆದರೆ ಆರ್ ಸಿಬಿಗೆ ಇಂದು ತವರಿನ ಅಂಕಣದಲ್ಲಿ ಆಡುವುದರಿಂದ ಆತ್ಮವಿಶ್ವಾಸ ಹೆಚ್ಚಾಗಲಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಕಳೆದ ಪಂದ್ಯದಲ್ಲಿ ಅಗ್ರ ಮೂವರು ಬ್ಯಾಟಿಗರು ಕೈಕೊಟ್ಟಿದ್ದರು. ವಿರಾಟ್ ಕೊಹ್ಲಿ, ಫಾ ಡು ಪ್ಲೆಸಿಸ್ ರಿಂದ ಖ್ಯಾತಿಗೆ ತಕ್ಕ ಆಟ ಬರಲಿಲ್ಲ. ಗ್ಲೆನ್ ಮ್ಯಾಕ್ಸ್ ವೆಲ್ ಬಂದ ಎಸೆತಕ್ಕೇ ಪೆವಿಲಿಯನ್ ಸೇರಿಕೊಂಡಿದ್ದರು. ಹೀಗಾಗಿ ದೊಡ್ಡ ಮೊತ್ತ ಗಳಿಸಲಾಗಲಿಲ್ಲ. ಆದರೆ ಕಳೆದ ಪಂದ್ಯದಲ್ಲಿ ಅನೂಜ್ ರಾವತ್ ಆಡಿದ ರೀತಿ ಆರ್ ಸಿಬಿಗೆ ಸ್ಪೂರ್ತಿ ನೀಡಿರಬಹುದು. ಬೌಲಿಂಗ್ ನಲ್ಲಿ ಮೊಹಮ್ಮದ್ ಸಿರಾಜ್ ಖ್ಯಾತಿಗೆ ತಕ್ಕ ಆಟವಾಡಬೇಕಿದೆ.

ಇತ್ತ ಪಂಜಾಬ್ ಕಿಂಗ್ಸ್ ನಲ್ಲಿ ಶಿಖರ್ ಧವನ್, ಸ್ಯಾಮ್ ಕ್ಯುರೇನ್ ಬ್ಯಾಟಿಂಗ್ ಶಕ್ತಿಯಾಗಿದ್ದಾರೆ. ಬೌಲಿಂಗ್ ನಲ್ಲಿ ಆರ್ ಸಿಬಿ ಮಾಜಿ ವೇಗಿ ಹರ್ಷಲ್ ಪಟೇಲ್ ದುಬಾರಿಯಾಗಿದ್ದರು. ಆದರೆ ಅರ್ಷ್ ದೀಪ್ ಸಿಂಗ್ ಉತ್ತಮ ದಾಳಿ ಸಂಘಟಿಸಿದ್ದರು. ಉಳಿದಂತೆ ಹರ್ಪ್ರೀತ್ ಬ್ರಾರ್ ಕೂಡಾ ಗಮನಾರ್ಹ ಪ್ರದರ್ಶನ ನೀಡಿದ್ದಾರೆ. ಇಂದಿನ ಈ ಪಂದ್ಯದಲ್ಲಿ ಯಾರು ಮೇಲುಗೈ ಸಾಧಿಸುತ್ತಾರೆ ನೋಡಬೇಕಿದೆ. ಈ ಪಂದ್ಯ ರಾತ್ರಿ 7.30 ಕ್ಕೆ ಆರಂಭವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ