ಜೈಪುರ: ಐಪಿಎಲ್ 2024 ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಅಬ್ಬರದ ಬ್ಯಾಟಿಂಗ್ ನಿಂದ ಗೆಲುವು ಕಂಡಿತ್ತು.
52 ಎಸೆತ ಎದುರಿಸಿದ್ದ ಸಂಜು ಸ್ಯಾಮ್ಸನ್ 6 ಸಿಕ್ಸರ್ ಸಹಿತ ಅಜೇಯ 82 ರನ್ ಗಳಿಸಿದ್ದರು. ಈ ಪಂದ್ಯವನ್ನು ರಾಜಸ್ಥಾನ್ 20 ರನ್ ಗಳಿಂದ ಗೆದ್ದುಕೊಂಡಿತು. ಸಂಜು ಸ್ಯಾಮ್ಸನ್ ಅಬ್ಬರದ ಇನಿಂಗ್ಸ್ ಗಾಗಿ ಅವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ನೀಡಲಾಯಿತು. ಆದರೆ ಇದಕ್ಕೆ ತಾನು ಅರ್ಹನಲ್ಲ ಎಂದು ಹೇಳಿಕೊಂಡಿದ್ದಾರೆ.
ಪಂದ್ಯದ ಬಳಿಕ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಸಂಜು ನಿಜ ಹೇಳಬೇಕೆಂದರೆ ನಾನು ಈ ಟ್ರೋಫಿಗೆ ಅರ್ಹನಲ್ಲ. ಇದನ್ನು ಬೌಲರ್ ಸಂದೀಪ್ ಶರ್ಮಗೆ ಕೊಡಬೇಕು. ಅವರು ಕೊನೆಯ ಆ ಓವರ್ ಅದ್ಭುತವಾಗಿ ಬೌಲಿಂಗ್ ಮಾಡದೇ ಇದ್ದಿದ್ದರೆ ನಾನು ಈವತ್ತು ಪಂದ್ಯಶ್ರೇಷ್ಠನಾಗುತ್ತಲೇ ಇರಲಿಲ್ಲ. ಹಾಗಾಗಿ ನಾನು ಅವರನ್ನು ಕರೆಯಬೇಕು ಎಂದುಕೊಂಡೆ. ಆಶ್ ಭಾಯಿ (ರವಿಚಂದ್ರನ್ ಅಶ‍್ವಿನ್) ಕೂಡಾ ಇದನ್ನೇ ಹೇಳಿದರು. ನಿಮ್ಮಲ್ಲಿ ಕೌಶಲ್ಯವಿರುವುದು ಮುಖ್ಯವಲ್ಲ, ಅದನ್ನು ಒತ್ತಡದ ಸಂದರ್ಭದಲ್ಲಿ ಹೇಗೆ ಅಳವಡಿಸಿಕೊಳ್ಳುತ್ತೀರಿ ಎನ್ನುವುದು ಮುಖ್ಯ. ಅದು ಈವತ್ತು ಸಂದೀಪ್ ಕಣ್ಣುಗಳಲ್ಲಿ, ಬಾಂಡಿ ಲ್ಯಾಂಗ್ವೇಜ್ ನಲ್ಲಿ ಕಾಣಿಸಿತ್ತು ಎಂದಿದ್ದಾರೆ.
ಸಂಜು ಸ್ಯಾಮ್ಸನ್ ಈ ಮಾತುಗಳನ್ನು ನೆಟ್ಟಿಗರು ಕೊಂಡಾಡಿದ್ದಾರೆ. ಒಬ್ಬ ನಾಯಕನಾದವರ ನಿಜ ಗುಣವಿದು. ತನ್ನ ವೈಯಕ್ತಿಕ ದಾಖಲೆಗಿಂತ ಇತರೆ ಆಟಗಾರರ ಶ್ರಮವನ್ನು ಗುರುತಿಸುವ ವಿಶಾಲ ಮನೋಭಾವವರಿಬೇಕು. ಅದು ಈವತ್ತು ಸಂಜುನಲ್ಲಿ ಇತ್ತು ಎಂದಿದ್ದಾರೆ.