ಐಪಿಎಲ್ 2024: ಗುಜರಾತ್ ಟೈಟನ್ಸ್ ಗೆಲುವು, ಹಾರ್ದಿಕ್ ಪಾಂಡ್ಯಗೆ ಮುಖಭಂಗ

Krishnaveni K

ಸೋಮವಾರ, 25 ಮಾರ್ಚ್ 2024 (08:41 IST)
Photo Courtesy: Twitter
ಅಹಮ್ಮದಾಬಾದ್: ಐಪಿಎಲ್ 2024 ರ ಮೊದಲ ಪಂದ್ಯದಲ್ಲೇ ಮುಂಬೈ ಇಂಡಿಯನ್ಸ್ ತಂಡ ಗುಜರಾತ್ ಟೈಟನ್ಸ್ ವಿರುದ್ಧ 6 ರನ್ ಗಳ ಸೋಲು ಅನುಭವಿಸಿದೆ. ನಾಯಕನಾಗಿ ಶುಬ್ಮನ್ ಗಿಲ್ ಮೊದಲ ಪಂದ್ಯದಲ್ಲೇ ಗೆಲುವು ಸಾಧಿಸಿದ್ದಾರೆ.

ಆದರೆ ಗುಜರಾತ್ ನಿಂದ ಮುಂಬೈಗೆ ತಂಡಕ್ಕೆ ಬರಲು ನಾಯಕತ್ವ ನೀಡಬೇಕು ಎಂದು ಷರತ್ತು ವಿಧಿಸಿ ಬಂದಿದ್ದ ಹಾರ್ದಿಕ್ ಪಾಂಡ್ಯಗೆ ಮೊದಲ ಪಂದ್ಯದಲ್ಲೇ ಮುಖಭಂಗವಾಗಿದೆ. ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 168 ರನ್ ಗಳಿಸಿತ್ತು. ಮುಂಬೈ ಪರ ಜಸ್ಪ್ರೀತ್ ಬುಮ್ರಾ 3 ವಿಕೆಟ್ ಕಬಳಿಸಿ ಗಮನ ಸೆಳೆದರು. ಆದರೆ ಅವರನ್ನು ಆರಂಭಿಕರಾಗಿ ಬೌಲಿಂಗ್ ಗಿಳಿಸದೇ ಹಾರ್ದಿಕ್ ತಾವೇ ಬೌಲಿಂಗ್ ಆರಂಭಿಸಿ ಪ್ರಯೋಗ ಮಾಡಿದರು. ಆದರೆ ಇದು ಯಾವುದೇ ಉಪಯೋಗವಾಗಲಿಲ್ಲ. ಅಂತಿಮವಾಗಿ 3 ಓವರ್ ಗಳಲ್ಲಿ 30 ರನ್ ಬಿಟ್ಟುಕೊಟ್ಟರು.

ಈ ಮೊತ್ತವನ್ನು ಮುಂಬೈ ಸುಲಭವಾಗಿಯೇ ಬೆನ್ನತ್ತಬಹುದಿತ್ತು. ಒಂದು ಹಂತದಲ್ಲಿ 36 ಎಸೆತಗಳಲ್ಲಿ 48 ರನ್ ಗಳಿಸಬೇಕಿತ್ತು. 7 ವಿಕೆಟ್ ಕೂಡಾ ಕೈಯಲ್ಲಿತ್ತು. ಆದರೆ ಗುಜರಾತ್ ಕೊನೆಯ ಓವರ್ ಗಳಲ್ಲಿ ಅದ್ಭುತ ಬೌಲಿಂಗ್ ನಡೆಸಿತು. 11 ಡಾಟ್ ಬಾಲ್ ಗಳನ್ನು ಎಸೆದಿದ್ದಲ್ಲದೆ, 6 ವಿಕೆಟ್ ಕಬಳಿಸಿತು. ಇದಕ್ಕೆ ಗುಜರಾತ್ ನ ಎಲ್ಲಾ ಬೌಲರ್ ಗಳ ಕೊಡುಗೆಯೂ ಇದೆ.

ಕೊನೆಯ ಓವರ್ ನಲ್ಲಿ ಮುಂಬೈಗೆ 19 ರನ್ ಬೇಕಾಗಿತ್ತು. ಈ ವೇಳೆ ಮೊದಲ ಎರಡು ಎಸೆತಗಳನ್ನು ಪಾಂಡ್ಯ ಸಿಕ್ಸರ್ ಮತ್ತು ಬೌಂಡರಿಗಟ್ಟಿದರು. ಆದರೆ ಮರು ಎಸೆತದಲ್ಲೇ ಔಟಾಗುವ ಮೂಲಕ ಮುಂಬೈ ಸೋಲಿಗೆ ಮುನ್ನುಡಿ ಬರೆದರು. ಬಹುಶಃ ನಾಯಕನಾಗಿ ಪಾಂಡ್ಯ ಕೊನೆಯವರೆಗೆ ಕ್ರೀಸ್ ನಲ್ಲಿದ್ದಿದ್ದರೆ ಮುಂಬೈ ಗೆಲ್ಲಬಹುದಿತ್ತು. ಆದರೆ ಕೊನೆಯ ಓವರ್ ನಲ್ಲಿ 2 ವಿಕೆಟ್ ಕೂಡಾ ಕಳೆದುಕೊಂಡಿತು. ಅನುಭವಿ ಉಮೇಶ್ ಯಾದವ್ ಕೊನೆಯ ಓವರ್ ನಲ್ಲಿ ಗುಜರಾತ್ ಗೆ ಗೆಲುವು ತಂದಿತ್ತು.  ಮುಂಬೈ ಪರ ಬ್ಯಾಟಿಂಗ್ ನಲ್ಲಿ ರೋಹಿತ್ ಶರ್ಮಾ 43, ಡಿವಾಲ್ಡ್ ಬ್ರೆವಿಸ್ 46 ರನ್ ಗಳಿಸಿದರು. ಗುಜರಾತ್ ಪರ ಅಝ್ತಮತ್ತುಲ್ಲಾ, ಉಮೇಶ್ ಯಾದವ್, ಸ್ಪೆನ್ಸರ್ ಜಾನ್ಸನ್, ಮೋಹಿತ್ ಶರ್ಮಾ ತಲಾ 2 ವಿಕೆಟ್ ಕಬಳಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ