ಧರ್ಮಶಾಲಾ: ಐಪಿಎಲ್ 2024 ರಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸತತ ನಾಲ್ಕನೇ ಗೆಲುವಿನ ಹುಡುಕಾಟದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಆಡಲಿದೆ. ಈ ಪಂದ್ಯ ಧರ್ಮಶಾಲಾ ಮೈದಾನದಲ್ಲಿ ನಡೆಯಲಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇದುವರೆಗೆ ಆಡಿದ 11 ಪಂದ್ಯಗಳಿಂದ 4 ಗೆಲುವು ಕಂಡಿದ್ದು 8 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 7 ನೇ ಸ್ಥಾನದಲ್ಲಿದೆ. ಕಳೆದ ಮೂರು ಪಂದ್ಯಗಳಲ್ಲಿ ಸತತವಾಗಿ ಗೆದ್ದಿರುವ ಆರ್ ಸಿಬಿ ಈಗಲೂ ಪ್ಲೇ ಆಫ್ ಭರವಸೆಯಿಟ್ಟುಕೊಂಡಿದೆ. ಆರ್ ಸಿಬಿ ಪ್ಲೇ ಆಫ್ ಕನಸು ಜೀವಂತವಾಗಿರಬೇಕಾದರೆ ಉಳಿದ ಎಲ್ಲಾ ಮೂರು ಲೀಗ್ ಪಂದ್ಯಗಳಲ್ಲಿ ಭರ್ಜರಿ ಅಂತರದಿಂದ ಗೆಲುವು ಕಾಣಬೇಕು.
ಕಳೆದ ಮೂರೂ ಪಂದ್ಯಗಳಲ್ಲಿ ಆರ್ ಸಿಬಿ ಬ್ಯಾಟಿಂಗ್ ಜೊತೆಗೆ ಬೌಲಿಂಗ್ ಕೂಡಾ ಅತ್ಯುತ್ತಮವಾಗಿತ್ತು. ಇದುವರೆಗೆ ಆರಂಭಿಕ ಪಂದ್ಯಗಳಲ್ಲಿ ಪೇಲವ ಬೌಲಿಂಗ್ ನಿಂದಾಗಿಯೇ ಆರ್ ಸಿಬಿ ಸಾಕಷ್ಟು ಟೀಕೆಗೊಳಗಾಗಿತ್ತು. ಆದರೆ ಈಗ ಬೌಲಿಂಗ್ ಸಮರ್ಥವಾಗಿರುವುದರಿಂದ ಆರ್ ಸಿಬಿ ಗೆಲುವು ಕಾಣುತ್ತಿದೆ.
ಇನ್ನು, ಪಂಜಾಬ್ ಕಿಂಗ್ಸ್ ಕೂಡಾ ಇದುವರೆಗೆ ಆಡಿದ 11 ಪಂದ್ಯಗಳಲ್ಲಿ 4 ಗೆಲುವು ಕಂಡುಕೊಂಡಿದೆ. ಆದರೆ ನೆಟ್ ರನ್ ರೇಟ್ ಆಧಾರದಲ್ಲಿ ಆರ್ ಸಿಬಿಗಿಂತ ಹಿನ್ನಡೆಯಲ್ಲಿದೆ. ಒಂದು ರೀತಿಯಲ್ಲಿ ಆರ್ ಸಿಬಿಯಂತೇ ಪಂಜಾಬ್ ಕೂಡಾ ಎಲ್ಲಾ ಇದ್ದೂ ಗೆಲುವು ಕಾಣದ ದುರದೃಷ್ಟ ತಂಡವಾಗಿದೆ. ಸತತ ಎರಡು ಗೆಲುವುಗಳ ನಂತರ ಕಳೆದ ಪಂದ್ಯದಲ್ಲಿ ಪಂಜಾಬ್ ಸೋತಿತ್ತು. ಹೀಗಾಗಿ ಇಂದು ಮತ್ತೆ ಗೆಲುವಿನ ಹಳಿಗೆ ಮರಳಲು ಪ್ರಯತ್ನಿಸಲಿದೆ. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗುವುದು.