ಬೆಂಗಳೂರು: ಐಪಿಎಲ್ 2024 ರಲ್ಲಿ ಸತತ ಎರಡು ಗೆಲುವು ಕಂಡುಕೊಂಡಿರುವ ಆರ್ ಸಿಬಿಗೆ ಈಗ ಪ್ಲೇ ಆಫ್ ಆಸೆ ಇನ್ನೂ ಜೀವಂತವಾಗಿದೆ. ಹೀಗೊಂದು ಪವಾಡ ನಡೆದರೆ ಆರ್ ಸಿಬಿಗೆ ಪ್ಲೇ ಆಫ್ ಹಾದಿ ಸುಗಮವಾಗಲಿದೆ. ಪ್ಲೇ ಆಫ್ ಲೆಕ್ಕಾಚಾರ ಹೇಗಿದೆ ನೋಡೋಣ.
ಕಳೆದ ಪಂದ್ಯದಲ್ಲಿ ಆರ್ ಸಿಬಿ ಗುಜರಾತ್ ಟೈಟನ್ಸ್ ವಿರುದ್ಧ 9 ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸಿತು. ಇದೀಗ ಆರ್ ಸಿಬಿ 10 ಪಂದ್ಯಗಳಿಂದ 3 ಗೆಲುವು ಕಂಡಿದ್ದು ಒಟ್ಟು 6 ಅಂಕ ಸಂಪಾದಿಸಿದೆ. ಅಂಕಪಟ್ಟಿಯಲ್ಲಿ ಆರ್ ಸಿಬಿಗೆ ಕೊನೆಯ ಸ್ಥಾನ. ಹೀಗಾಗಿ ಪ್ಲೇ ಆಫ್ ಹಾದಿ ಕ್ಷೀಣವಾಗಿದೆ.
ಹಾಗಂತ ಸಂಪೂರ್ಣವಾಗಿ ಪ್ಲೇ ಆಫ್ ಹಂತ ಮುಚ್ಚಿ ಹೋಗಿದೆ ಎಂದರ್ಥವಲ್ಲ. ಈಗಲೂ ಪವಾಡ ನಡೆದರೆ ಆರ್ ಸಿಬಿ ಪ್ಲೇ ಆಫ್ ಗೇರಬಹುದಾಗಿದೆ. ಇದಕ್ಕೆ ಆರ್ ಸಿಬಿ ಮುಂದಿರುವುದು ಕೇವಲ ನಾಲ್ಕು ಲೀಗ್ ಪಂದ್ಯಗಳು. ಒಂದು ತಂಡ ಪ್ಲೇ ಆಫ್ ಹಾದಿಗೇರಲು 16 ಅಂಕ ಸಂಪಾದಿಸಬೇಕು.
ಆರ್ ಸಿಬಿ ಇನ್ನೂ 10 ಅಂಕ ಸಂಪಾದಿಸಿದರೆ ಮಾತ್ರ ಪ್ಲೇ ಆಫ್ ಹಾದಿಗೇರಬಹುದಾಗಿದೆ. ಆದರೆ ಸದ್ಯಕ್ಕೆ ಆರ್ ಸಿಬಿ ಬಳಿ ನಾಲ್ಕು ಪಂದ್ಯಗಳಿವೆ. ಈ ಎಲ್ಲಾ ಪಂದ್ಯಗಳನ್ನು ಗೆದ್ದರೂ ತಂಡಕ್ಕೆ ತಲಾ 2 ರಂತೆ 8 ಅಂಕ ಮಾತ್ರ ಗಳಿಸಬಹುದಾಗಿದೆ. ಹಾಗಿದ್ದಾಗ ಒಟ್ಟು ಅಂಕ 14 ಆಗಲಿದೆ.
ಇಂತಹ ಸಂದರ್ಭದಲ್ಲಿ ಆರ್ ಸಿಬಿಗೆ ಈಗ ಟಾಪ್ 3 ರಲ್ಲಿರುವ ಮತ್ತು ನಂತರದ ಸ್ಥಾನಗಳಲ್ಲಿರುವ 6 ತಂಡಗಳ ಫಲಿತಾಂಶಗಳೂ ಮುಖ್ಯವಾಗಲಿದೆ. ರಾಜಸ್ಥಾನ್ ರಾಯಲ್ಸ್ ಅಂಕಪಟ್ಟಿಯಲ್ಲಿ 16 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಅದರ ನಂತರ ಐದು ಸ್ಥಾನಗಳಲ್ಲಿರುವ ತಂಡಗಳು ತಲಾ 10 ಅಂಕ ಗಳಿಸಿವೆ. ಇದೀಗ ಈ ಎಲ್ಲಾ ತಂಡಗಳಿಗೂ 5 ಲೀಗ್ ಪಂದ್ಯಗಳಿರಲಿವೆ. ಈ ಪಂದ್ಯಗಳಲ್ಲಿ ಈ ಎಲ್ಲಾ ತಂಡಗಳು ಸೋಲಬೇಕು ಮತ್ತು ಆರ್ ಸಿಬಿ ಉಳಿದ ಎಲ್ಲಾ ಪಂದ್ಯಗಳಲ್ಲಿ ಭರ್ಜರಿ ರನ್ ರೇಟ್ ನೊಂದಿಗೆ ನಾಲ್ಕನೇ ಸ್ಥಾನಕ್ಕೇರಬೇಕು. ಅಂದರೆ ಮಾತ್ರ ಆರ್ ಸಿಬಿಗೆ ಪ್ಲೇ ಆಫ್ ಅವಕಾಶ ಸಿಗಲಿದೆ.