IPL 2025: ನಿಮ್ಮ ಪ್ರಕಾರ ಅತ್ಯುತ್ತಮ ಆಟಗಾರರನ್ನೊಳಗೊಂಡ ತಂಡ ಯಾವುದು

Krishnaveni K

ಮಂಗಳವಾರ, 26 ನವೆಂಬರ್ 2024 (09:49 IST)
Photo Credit: X
ದುಬೈ: ಐಪಿಎಲ್ 2025 ಕ್ಕಾಗಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಎಲ್ಲಾ ಫ್ರಾಂಚೈಸಿಗಳು ತಮಗೆ ಬೇಕಾದ ಆಟಗಾರರನ್ನು ಹರಾಜಿನಲ್ಲಿ ಖರೀದಿ ಮಾಡಿವೆ. ನಿಮ್ಮ ಪ್ರಕಾರ ಈ ತಂಡಗಳ ಪೈಕಿ ಅತ್ಯುತ್ತಮ ಆಟಗಾರರನ್ನೊಳಗೊಂಡ ತಂಡ ಯಾವುದು?
 
ಚೆನ್ನೈ ಸೂಪರ್ ಕಿಂಗ್ಸ್
ಸಿಎಸ್ ಕೆ ತಂಡವನ್ನು ನೋಡಿದರೆ ಫ್ರಾಂಚೈಸಿ ಸಾಕಷ್ಟು ಲೆಕ್ಕಾಚಾರವನ್ನು ಹಾಕಿಯೇ ತಂಡವನ್ನು ಆಯ್ಕೆ ಮಾಡಿಕೊಂಡಂತಿದೆ. ಹೆಚ್ಚು ಸ್ಟಾರ್ ಆಟಗಾರರು ಎಂದು ನೋಡದೇ ತನ್ನ ತಂಡದ ಅಗತ್ಯಕ್ಕೆ ತಕ್ಕಂತೆ ಮತ್ತು ಟಿ20 ಫಾರ್ಮ್ಯಾಟ್ ಗೆ ಹೊಂದಿಕೊಳ್ಳುವ ಪ್ರತಿಭಾವಂತರನ್ನೇ ಆಯ್ಕೆ ಮಾಡಿದೆ. ಋತುರಾಜ್ ಗಾಯಕ್ವಾಡ್, ಧೋನಿ, ರವೀಂದ್ರ ಜಡೇಜಾರಂತಹ ರಿಟೈನ್ಟ್ ಆಟಗಾರರಲ್ಲದೆ, ಡೆವನ್ ಕಾನ್ವೆ, ರಾಹುಲ್ ತ್ರಿಪಾಠಿ, ದೀಪಕ್ ಹೂಡಾ, ಕಮಲೇಶ್ ನಾಗರಕೋಟಿ, ರವಿಚಂದ್ರನ್ ಅಶ್ವಿನ್, ಸ್ಯಾಮ್ ಕ್ಯುರೇನ್ ರಂತಹ ಪ್ರತಿಭಾವಂತ ಟಿ20 ಸ್ಪೆಷಲಿಸ್ಟ್ ಗಳನ್ನು ಆಯ್ಕೆ ಮಾಡಿಕೊಂಡು ಜಾಣತನ ಮೆರೆದಿದೆ.

ಡೆಲ್ಲಿ ಕ್ಯಾಪಿಟಲ್ಸ್
ಈ ಬಾರಿ ಹರಾಜಿನಲ್ಲಿ ಕೆಲವು ಆಟಗಾರರ ಮೌಲ್ಯ ಹೆಚ್ಚಿಸಿದ ಕೀರ್ತಿ ಡೆಲ್ಲಿ ಫ್ರಾಂಚೈಸಿಯದ್ದು. ಆರ್ ಸಿಬಿ ನಾಯಕ ಫಾ ಡು ಪ್ಲೆಸಿಸ್ ರನ್ನು ಮೂಲಬೆಲೆಗೇ ಖರೀದಿಸಿದರೆ ಮಿಚೆಲ್ ಸ್ಟಾರ್ಕ್, ಮೋಹಿತ್ ಶರ್ಮ, ಕೆಎಲ್ ರಾಹುಲ್ ರನ್ನು ಆಟಗಾರರನ್ನು ಖರೀದಿ ಮಾಡಿದೆ. ರಾಹುಲ್, ಫಾ ಡು ಮುಂತಾದ ಆಟಗಾರರ ಸೇರ್ಪಡೆಯಿಂದ ತಂಡದ ಬ್ಯಾಟಿಂಗ್ ಬಲಿಷ್ಠವಾಗಿದೆ.

ಗುಜರಾತ್ ಟೈಟನ್ಸ್
ಇಶಾಂತ್ ಶರ್ಮಾರಂತಹ ಅನುಭವಿ ವೇಗಿಯನ್ನು ಕಡಿಮೆ ಬೆಲೆಗೆ ಖರೀದಿ ಮಾಡುವಲ್ಲಿ ಯಶಸ್ವಿಯಾದ ಗುಜರಾತ್ ಇವರ ಜೊತೆಗೆ ಮೊಹಮ್ಮದ್ ಸಿರಾಜ್, ಕಗಿಸೊ ರಬಾಡ, ರಶೀದ್ ಖಾನ್, ಪ್ರಸಿದ್ಧ ಕೃಷ್ಣರನ್ನು ಖರೀದಿ ಮಾಡಿ ಬೌಲಿಂಗ್ ಬಲಿಷ್ಠ ಮಾಡಿಕೊಂಡಿದೆ. ಆದರೆ ಬ್ಯಾಟಿಂಗ್ ನಲ್ಲಿ ಮಾತ್ರ ಯಾಕೋ ಶುಬ್ಮನ್ ಗಿಲ್, ಸಾಯಿ ಸುದರ್ಶನ್ ರನ್ನೇ ನೆಚ್ಚಿಕೊಳ್ಳಬೇಕಾದ ಪರಿಸ್ಥಿತಿ ಬರಬಹುದು ಎನಿಸುತ್ತಿದೆ.

ಕೆಕೆಆರ್
ಶ್ರೇಯಸ್ ಅಯ್ಯರ್ ರನ್ನು ಬಿಟ್ಟುಕೊಟ್ಟ ಕೆಕೆಆರ್ ವೆಂಕಟೇಶ್ ಅಯ್ಯರ್ ರನ್ನು ದುಬಾರಿ ಬೆಲೆ ಕೊಟ್ಟು ಮತ್ತೆ ಖರೀದಿ ಮಾಡಿದೆ. ಅವರ ಹೊರತಾಗಿ ರಾಜ್ಯದ ಮನೀಶ್ ಪಾಂಡೆ, ರಘುವಂಶಿ, ರಿಂಕು ಸಿಂಗ್, ರೋವ್ಮಾನ್ ಪೊವೆಲ್ ರನ್ನೊಳಗೊಂಡ ಬಲಿಷ್ಠ ಬ್ಯಾಟಿಂಗ್ ಹೊಂದಿದೆ. ಬೌಲಿಂಗ್ ನಲ್ಲೂ ಮಯಾಂಕ್ ಮಾರ್ಂಖಡೆ, ವರುಣ್ ಚಕ್ರವರ್ತಿ, ಅನ್ರಿಚ್ ನೋರ್ಟ್ಜೆ ಸೇರ್ಪಡೆಯಿಂದ ಮತ್ತಷ್ಟು ಬಲಿಷ್ಠವಾಗಿದೆ.

ಲಕ್ನೋ ಸೂಪರ್ ಜೈಂಟ್ಸ್
ಕೆಎಲ್ ರಾಹುಲ್ ರನ್ನು ಕೈ ಬಿಟ್ಟ ಲಕ್ನೋ ಆಡನ್ ಮಾರ್ಕರಮ್ , ಆಯುಷ್ ಬದಾನಿ ಉಳಿಸಿಕೊಂಡಿತ್ತು. ಇದೀಗ ಡೇವಿಡ್ ಮಿಲ್ಲರ್, ರಿಷಭ್ ಪಂತ್, ಹಿಮ್ಮತ್ ಸಿಂಗ್ ರಂತಹ ಹೊಡೆಬಡಿಯ ದಾಂಡಿಗರನ್ನು ಖರೀದಿಸಿ ಬ್ಯಾಟಿಂಗ್ ವಿಭಾಗವನ್ನು ಬಲಿಷ್ಠ ಮಾಡಿಕೊಂಡಿದೆ. ಆದರೆ ಬೌಲಿಂಗ್ ನಲ್ಲಿ ಸ್ಟಾರ್ ಗಿರಿಗೆ ಮಣೆ ಹಾಕದೇ ಮಯಾಂಕ್ ಯಾದವ್, ಆವೇಶ್ ಖಾನ್, ಆಕಾಶ್ ದೀಪ್ ಮುಂತಾದ ದೇಸೀಯ ಪ್ರತಿಭೆಗಳನ್ನು ಬರಮಾಡಿಕೊಂಡಿದೆ. ಆಲ್ ರೌಂಡರ್ ಆಗಿ ನಿಕಲಸ್ ಪೂರನ್ ಇರುವುದು ಅವರಿಗೆ ಪ್ಲಸ್ ಪಾಯಿಂಟ್.

ಮುಂಬೈ ಇಂಡಿಯನ್ಸ್
ಮುಂಬೈ ಇಂಡಿಯನ್ಸ್ ಪ್ರತಿಭಾವಂತರ ಜೊತೆಗೆ ದಿಗ್ಗಜರ ಗೂಡು. ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ತಿಲಕ್ ವರ್ಮ ಹೆಸರು ಕೇಳಿದರೇ ಎದುರಾಳಿಗಳಿಗೆ ನಡುಕ ಬರಬೇಕು. ಇನ್ನು ಬೌಲಿಂಗ್ ನಲ್ಲಿ ಜಸ್ಪ್ರೀತ್ ಬುಮ್ರಾ, ದೀಪಕ್ ಚಹರ್, ಕರ್ಣ್ ಶರ್ಮ ಸೇರಿದಂತೆ ಘಟಾನುಘಟಿಗಳ ಪಡೆಯೇ ಮುಂಬೈ ಬಳಿಯಿದೆ.

ಪಂಜಾಬ್ ಕಿಂಗ್ಸ್
ಪಂಜಾಬ್ ಕಿಂಗ್ಸ್ ಈ ಬಾರಿ ಐಪಿಎಲ್ ವಿಜೇತ ತಂಡದ ನಾಯಕನಾಗಿದ್ದ ಶ್ರೇಯಸ್ ಅಯ್ಯರ್ ರನ್ನು ಖರೀದಿ ಮಾಡಿಕೊಂಡು ಬ್ಯಾಟಿಂಗ್ ಬಲಪಡಿಸಿಕೊಂಡಿದೆ. ಆದರೆ ಅವರನ್ನು ಬಿಟ್ಟರೆ ಬ್ಯಾಟಿಂಗ್ ನಲ್ಲಿ ದಿಗ್ಗಜರು ಯಾರೂ ಇಲ್ಲ. ಆದರೆ ಬೌಲಿಂಗ್ ನಲ್ಲಿ ಟಿ20 ಸ್ಪೆಷಲಿಸ್ಟ್ ಅರ್ಷ್ ದೀಪ್ ಸಿಂಗ್, ಕುಲದೀಪ್ ಸೇನ್, ಲೂಕಿ ಫರ್ಗ್ಯುಸನ್, ಯಜುವೇಂದ್ರ ಚಾಹಲ್ ಅವರನ್ನು ಹೊಂದಿದೆ.

ಆರ್ ಸಿಬಿ
ಆರ್ ಸಿಬಿ ತಂಡ ಇದುವರೆಗೆ ಇದ್ದ ದಿಗ್ಗಜರನ್ನೂ ಕಳೆದುಕೊಂಡು ಈಗ ಅಷ್ಟೇನೂ ಖ್ಯಾತರಲ್ಲದ ಆಟಗಾರರನ್ನು ಖರೀದಿ ಮಾಡಿ ಟೀಕೆಗೆ ಗುರಿಯಾಗಿದೆ. ವಿರಾಟ್ ಕೊಹ್ಲಿ, ರಜತ್ ಪಟಿದಾರ್ ಇಬ್ಬರೇ ಹಳೆಯ ಕಲಿಗಳು. ಆದರೆ ಬೌಲಿಂಗ್ ನಲ್ಲಿ ಭುವನೇಶ್ವರ್ ಕುಮಾರ್, ಜೋಶ್ ಹೇಝಲ್ ವುಡ್, ಯಶ್ ದಯಾಳ್ ಶಕ್ತಿಯಾಗಬಲ್ಲರು. ಇದಲ್ಲದೆ ಆಲ್ ರೌಂಡರ್ ಸ್ಥಾನಕ್ಕೆ ಕೃನಾಲ್ ಪಾಂಡ್ಯ, ಲಿಯಾಮ್ ಲಿವಿಂಗ್ ಸ್ಟೋನ್ ರನ್ನು ಖರೀದಿ ಮಾಡಿದ್ದು ಎಷ್ಟರಮಟ್ಟಿಗೆ ಕೈ ಹಿಡಿಯುತ್ತದೆ ನೋಡಬೇಕಿದೆ.

ರಾಜಸ್ಥಾನ್ ರಾಯಲ್ಸ್
ಮೆಂಟರ್ ರಾಹುಲ್ ದ್ರಾವಿಡ್ ರಂತೇ ಅಳೆದು ತೂಗಿ ತಂಡವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಸಂಜು ಸ್ಯಾಮ್ಸನ್ , ಯಶಸ್ವಿ ಜೈಸ್ವಾಲ್, ಶಿಮ್ರಾನ್ ಹೆಟ್ ಮೇರ್ ಉಳಿಸಿಕೊಂಡ ಆಟಗಾರರು. ಉಳಿದಂತೆ ಶುಬ್ಮನ್ ದುಬೆ, ವೈಭವ್ ಸೂರ್ಯವಂಶಿ ಮುಂತಾದ ಯುವ ಪ್ರತಿಭೆಗಳಿಗೆ ಅವಕಾಶ ನೀಡಿದೆ. ಬೌಲಿಂಗ್ ನಲ್ಲಿ ಆಕಾಶ್ ಮಧ್ವಾಲ್, ಜೋಫ್ರಾ ಆರ್ಚರ್, ವಣೀಂದು ಹಸರಂಗ, ಮಹೇಶ್ ತೀಕ್ಷಣ, ಸಂದೀಪ್ ಶರ್ಮರಂತಹ ಪ್ರತಿಭಾವಂತರನ್ನು ಖರೀದಿ ಮಾಡಿದೆ. ರಿಯಾನ್ ಪರಾಗ್, ನಿತೀಶ್ ರಾಣಾ ಇರುವಾಗ ಆಲ್ ರೌಂಡರ್ ಸ್ಥಾನ ಭದ್ರವಾಗಿರಲಿದೆ.

ಸನ್ ರೈಸರ್ಸ್  ಹೈದರಾಬಾದ್
ಕಳೆದ ಬಾರಿ ದೊಡ್ಡ ಸ್ಟಾರ್ ಗಳನ್ನು ಹೊಂದಿದ್ದ ಹೈದರಾಬಾದ್ ಈ ಬಾರಿ ಪ್ರತಿಭೆಗೆ ಹೆಚ್ಚು ಮಣೆ ಹಾಕಿದೆ. ಟ್ರಾವಿಸ್ ಹೆಡ್, ನಿತೀಶ್ ರೆಡ್ಡಿ, ಪ್ಯಾಟ್ ಕುಮಿನ್ಸ್ ಹೆನ್ರಿಚ್ ಕ್ಲಾಸನ್ ರನ್ನು ಉಳಿಸಿಕೊಂಡಿರುವ ಹೈದರಾಬಾದ್ ಅಭಿನವ್ ಮನೋಹರ್, ಅನಿಕೇತ್ ವರ್ಮರಂತಹ ಪ್ರತಿಭಾವಂತರನ್ನು ಖರೀದಿ ಮಾಡಿದೆ. ಬೌಲಿಂಗ್ ನಲ್ಲಿ ಜಯದೇವ್ ಉನಾದ್ಕಟ್, ಮೊಹಮ್ಮದ್ ಶಮಿ,ರಾಹುಲ್ ಚಹರ್ ತಂಡಕ್ಕೆ ಬಂದಿರುವುದರಿಂದ ಆ ವಿಭಾಗ ಗಟ್ಟಿಯಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ