ಮುಂಬೈ: ಟೀಂ ಇಂಡಿಯಾದ ಟಿ20 ಕ್ರಿಕೆಟ್ ನಿಂದ ಸಂಪೂರ್ಣವಾಗಿ ಕಡೆಗಣಿಸಲ್ಪಟ್ಟಿರುವ ಕನ್ನಡಿಗ ಬ್ಯಾಟಿಗ ಕೆಎಲ್ ರಾಹುಲ್ ಗೆ ಈಗ ಟೆಸ್ಟ್ ಕ್ರಿಕೆಟ್ ನಲ್ಲೂ ಇಶಾನ್ ಕಿಶನ್ ಕುತ್ತು ತಂದಿದ್ದಾರೆ.
ಬುಚ್ಚಿ ಬಾಬು ಆಹ್ವಾನಿತ ಕ್ರಿಕೆಟ್ ಟೂರ್ನಿಯಲ್ಲಿ ಇಶಾನ್ ಕಿಶನ್ ಸಿಕ್ಸರ್ ಗಳ ಸುರಿಮಳೆ ಸುರಿಸಿ ಶತಕ ಸಿಡಿಸಿದ್ದಾರೆ. ಬಹಳ ದಿನಗಳ ನಂತರ ಇಶಾನ್ ದೇಶೀಯ ಕ್ರಿಕೆಟ್ ನಲ್ಲಿ ಆಡಿ ಮಿಂಚಿದ್ದಾರೆ. ಟೀಂ ಇಂಡಿಯಾಗೆ ಕಮ್ ಬ್ಯಾಕ್ ಮಾಡಲು ಅವರಿಗೆ ಇದು ಉತ್ತಮ ವೇದಿಕೆಯಾಗಿತ್ತು. ಅದನ್ನು ಅವರು ಸರಿಯಾಗಿಯೇ ಬಳಸಿಕೊಂಡಿದ್ದಾರೆ.
ರೆಡ್ ಬಾಲ್ ಕ್ರಿಕೆಟ್ ನಲ್ಲಿ ಹೊಡೆಬಡಿಯ ಶತಕ ಸಿಡಿಸಿರುವ ಇಶಾನ್ ಈಗ ಟೀಂ ಇಂಡಿಯಾ ಟೆಸ್ಟ್ ತಂಡದಲ್ಲಿ ವಿಕೆಟ್ ಕೀಪರ್ ಬ್ಯಾಟಿಗ ಸ್ಥಾನಕ್ಕೆ ಟವೆಲ್ ಹಾಕಿದ್ದಾರೆ. ರಿಷಬ್ ಪಂತ್ ಬಿಟ್ಟರೆ ಸದ್ಯಕ್ಕೆ ಕೆಎಲ್ ರಾಹುಲ್ ವಿಕೆಟ್ ಕೀಪರ್ ಆಗಿ ತಂಡದ ನಂತರದ ಆಯ್ಕೆಯಾಗಿದ್ದರು.
ಆದರೆ ಈಗ ಇಶಾನ್ ಕಿಶನ್ ಶತಕ ಸಿಡಿಸಿ ಆಯ್ಕೆಗಾರರ ಗಮನ ಸೆಳೆದಿದ್ದಾರೆ. ಈಗ ಕೆಎಲ್ ರಾಹುಲ್ ಬ್ಯಾಟಿಂಗ್ ನಲ್ಲಿ ಉತ್ತಮ ಪ್ರದರ್ಶನ ತೋರದೇ ಇದ್ದರೆ ಅವರಿಗೆ ಸುದೀರ್ಘ ಮಾದರಿಯಲ್ಲೂ ಗೇಟ್ ಪಾಸ್ ಸಿಗಬಹುದು. ಹೀಗಾಗಿ ರಾಹುಲ್ ಮುಂದೆ ತಮಗೆ ಸಿಗುವ ಅವಕಾಶದಲ್ಲಿ ಉತ್ತಮ ಪ್ರದರ್ಶನ ನೀಡಲೇಬೇಕಾದ ಒತ್ತಡಕ್ಕೆ ಸಿಲುಕಿದ್ದಾರೆ. ಕೇವಲ ಟೆಸ್ಟ್ ಮಾತ್ರವಲ್ಲ, ಇಶಾನ್ ಮತ್ತಷ್ಟು ದೇಶೀಯ ಪಂದ್ಯಗಳಲ್ಲಿ ಇದೇ ರೀತಿ ಪ್ರದರ್ಶನ ಕಾಯ್ದುಕೊಂಡರೆ ಏಕದಿನ ತಂಡದಲ್ಲೂ ಸ್ಥಾನ ಪಡೆಯಬಹುದು. ಆಗ ರಾಹುಲ್ ಸಂಕಷ್ಟಕ್ಕೆ ಸಿಲುಕಲಿದ್ದಾರೆ.