ಮುಂಬೈ: ಕುಂಟು ನೆಪ ಹೇಳಿ ಟೀಂ ಇಂಡಿಯಾ ಟೆಸ್ಟ್ ಮಾದರಿ ಕ್ರಿಕೆಟ್ ನಿಂದ ತಪ್ಪಿಸಿಕೊಂಡಿರುವ ಇಶಾನ್ ಕಿಶನ್ ಮತ್ತು ರಣಜಿ ಆಡಲು ನೆವ ಹೇಳಿದ್ದ ಶ್ರೇಯಸ್ ಅಯ್ಯರ್ ಈಗ ಬುದ್ಧಿ ಕಲಿತುಕೊಂಡಂತಿದೆ.
ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಗೆಲುವಿನ ಬಳಿಕ ನಾಯಕ ರೋಹಿತ್ ಶರ್ಮಾ ಆಡುವ ಹಸಿವಿರುವವರಿಗೆ ಮಾತ್ರ ತಂಡದಲ್ಲಿ ಅವಕಾಶ ಎಂದು ಖಡಕ್ ಆಗಿ ಹೇಳಿದ್ದರು. ಇದು ಗಾಯದ ಕಾರಣಕ್ಕೆ ಟೀಂ ಇಂಡಿಯಾ ಟೆಸ್ಟ್ ಸರಣಿಯಿಂದ ಅರ್ಧಕ್ಕೇ ಹೊರನಡೆದ ಶ್ರೇಯಸ್ ಅಯ್ಯರ್ ಮತ್ತು ಮಾನಸಿಕ ಸುಸ್ತು ಎಂದು ರಣಜಿಯೂ ಆಡದೇ ಐಪಿಎಲ್ ಗೆ ಸಿದ್ಧತೆ ನಡೆಸುತ್ತಿದ್ದ ಇಶಾನ್ ಕಿಶನ್ ಗೆ ಪರೋಕ್ಷವಾಗಿ ಟಾಂಗ್ ಕೊಟ್ಟಂತಿತ್ತು.
ಇದರ ಬೆನ್ನಲ್ಲೇ ಬಿಸಿಸಿಐ ಕೂಡಾ ಈ ಇಬ್ಬರು ಆಟಗಾರರ ಮೇಲೆ ಗರಂ ಆಗಿತ್ತು. ಶಿಸ್ತು ಕ್ರಮ ಕೈಗೊಳ‍್ಳಲೂ ಮುಂದಾಗಿತ್ತು. ಜೊತೆಗೆ ದೇಶೀಯ ಕ್ರಿಕೆಟ್ ನಲ್ಲಿ ಆಟಗಾರರ ವೇತನ ಪರಿಷ್ಕರಣೆಗೂ ಮುಂದಾಗಿದೆ. ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡ ಕ್ರಿಕೆಟಿಗರು ದೇಶೀಯ ಕ್ರಿಕೆಟ್ ಗೆ ಮರಳಿದ್ದಾರೆ.
ಇಶಾನ್ ಕಿಶನ್ ಮುಂಬೈನಲ್ಲಿ ಡಿವೈ ಪಾಟೀಲ್ ಟಿ20 ಟೂರ್ನಿಯಲ್ಲಿ ಆಡಿದ್ದಾರೆ. ಆದರೆ ಮೊದಲ ಪಂದ್ಯದಲ್ಲೇ ವೈಫಲ್ಯ ಅನುಭವಿಸಿದ್ದಾರೆ. ಹಾಗಿದ್ದರೂ ಬಹಳ ದಿನಗಳ ನಂತರ ಕ್ರಿಕೆಟ್ ಕಣಕ್ಕೆ ಮರಳಿದ್ದಾರೆ. ಇತ್ತ, ಶ್ರೇಯಸ್ ಅಯ್ಯರ್ ರಣಜಿ ಆಡುವ ಮನಸ್ಸು ಮಾಡಿದ್ದಾರೆ. ಮುಂಬೈ ಪರ ಸೆಮಿಫೈನಲ್ ಪಂದ್ಯವಾಡಲಿದ್ದಾರೆ. ಈಗಾಗಲೇ ಸೆಮಿಫೈನಲ್ ಪಂದ್ಯಕ್ಕೆ ಮುಂಬೈ ತಂಡ ಘೋಷಣೆ ಮಾಡಿದ್ದು ಶ್ರೇಯಸ್ ಹೆಸರೂ ಸೇರ್ಪಡೆಯಾಗಿದೆ. ಅಂತೂ ಕೆಟ್ಟ ಮೇಲೆ ಬುದ್ಧಿ ಬಂತು ಅಂತಾರಲ್ಲ. ಅದು ಇದಕ್ಕೇ ಇರಬೇಕು.