ದಿ ಓವಲ್: ಬಹುಶಃ ನಿನ್ನೆಯೇ ಕೆಎಲ್ ರಾಹುಲ್ ಇತರ ಬ್ಯಾಟ್ಸ್ ಮನ್ ಗಳಂತೇ ಬೇಗನೇ ಪೆವಲಿಯನ್ ಸೇರಿಕೊಂಡಿದ್ದರೆ ಇಂದಿಗೆ ರಾಹುಲ್ ವೃತ್ತಿ ಜೀವನದ ಕತೆ ಅರ್ಧ ಮುಗಿಯುತ್ತಿತ್ತು. ಆದರೆ ಅವರ ಅದೃಷ್ಟ ಕೈಬಿಡಲಿಲ್ಲ.
ಕೆಎಲ್ ರಾಹುಲ್ ಹೊಡೆದ 46 ರನ್ ಗಳ ಉಪಯುಕ್ತ ಇನಿಂಗ್ಸ್ ಟೀಂ ಇಂಡಿಯಾವನ್ನು ಅಪಾಯದಿಂದ ಪಾರು ಮಾಡಿದ್ದಷ್ಟೇ ಅಲ್ಲ ಅವರ ವೃತ್ತಿ ಜೀವನವನ್ನೂ ಉಳಿಸಿದೆ. ಈ ಸರಣಿಯುದ್ದಕ್ಕೂ ಕಳಪೆ ಪ್ರದರ್ಶನ ನೀಡಿ ತಂಡದಿಂದ ಕೊಕ್ ಸಿಗುವ ಅಪಾಯದಲ್ಲಿದ್ದ ರಾಹುಲ್ ಗೆ ಈ ಅಜೇಯ 46 ರನ್ ಗಳ ಇನಿಂಗ್ಸ್ ಜೀವದಾನ ನೀಡಿದೆ.
ಇಂಗ್ಲೆಂಡ್ ನೀಡಿದ 465 ರನ್ ಗಳ ಬೃಹತ್ ಮೊತ್ತ ಬೆನ್ನತ್ತಿದ ಟೀಂ ಇಂಡಿಯಾ ಆರಂಭದಲ್ಲೇ ಕಂಬಿ ಕಿತ್ತ ರೈಲಿನಂತಾಯಿತು. ಕೇವಲ 2 ರನ್ ಗೆ 3 ಪ್ರಮುಖ ವಿಕೆಟ್ ಕಳೆದುಕೊಂಡು ಹೀನಾಯ ಸ್ಥಿತಿಯಲ್ಲಿತ್ತು. ಶಿಖರ್ ಧವನ್, ಚೇತೇಶ್ವರ ಪೂಜಾರ ಮತ್ತು ವಿರಾಟ್ ಕೊಹ್ಲಿ ವಿಕೆಟ್ ಕಳೆದುಕೊಂಡು ಟೀಂ ಇಂಡಿಯಾ ಒದ್ದಾಡುತ್ತಿದ್ದಾಗ ಕೆಎಲ್ ರಾಹುಲ್ 46 ರನ್ ಗಳಿಸಿ ಚೇತರಿಕೆ ನೀಡಿದರು. ಇವರಿಗೆ ಉಪನಾಯಕ ಅಜಿಂಕ್ಯಾ ರೆಹಾನೆ (10) ಸಾಥ್ ನೀಡಿದರು.
ಇದುವರೆಗೂ ಸರಣಿಯಲ್ಲಿ ಹಳಿ ತಪ್ಪಿದವರಂತೆ ಆಡಿದ್ದ ರಾಹುಲ್ ಈ ಪಂದ್ಯದಲ್ಲಿ ಕೊಂಚ ಸಕಾರಾತ್ಮಕ ಲಕ್ಷಣ ತೋರಿದರು. ಒಂದು ಹಂತದಲ್ಲಿ ಅವರ ವಿರುದ್ಧ ಎಲ್ ಬಿಡಬ್ಲ್ಯು ಮನವಿ ಬಂದರೂ ರಿವ್ಯೂನಲ್ಲಿ ನಾಟೌಟ್ ಆಗಿ ಬಂತು. ಹೀಗಾಗಿ ಭಾರತದ ಇನಿಂಗ್ಸ್ ಗೆ ರಾಹುಲ್ ಆಸರೆಯಾದರು. ಭಾರತ ಈ ಪಂದ್ಯವನ್ನು ಗೆಲ್ಲಬೇಕಾದರೆ ಇನ್ನೂ 406 ರನ್ ಬೇಕು. ಅದು ಸುಲಭವಲ್ಲ. ಆದರೆ ರಾಹುಲ್ ಮಾತ್ರ ಮುಂಬರುವ ಸರಣಿಗಳಿಗೆ ತಮ್ಮ ಸ್ಥಾನ ಭದ್ರಮಾಡಿಕೊಂಡರು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.