KL Rahul: ಯಾವ ಸ್ಥಾನವಾದರೂ ಓಕೆ ಎಂದ ಕೆಎಲ್ ರಾಹುಲ್

Krishnaveni K

ಶನಿವಾರ, 6 ಜನವರಿ 2024 (13:28 IST)
ಮುಂಬೈ: ಟೀಂ ಇಂಡಿಯಾದಲ್ಲಿ ಇತ್ತೀಚೆಗಿನ ದಿನಗಳಲ್ಲಿ ಆಡುವ ಬಳಗದಲ್ಲಿ ಸ್ಥಾನ ಪಡೆಯಲು ಭಾರೀ ಪೈಪೋಟಿಯಿದೆ. ಈ ಬಗ್ಗೆ ಕೆಎಲ್ ರಾಹುಲ್ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿ ಮುಗಿದ ಬಳಿಕ ಮನ ಬಿಚ್ಚಿ ಮಾತನಾಡಿದ್ದಾರೆ.

ಸುನಿಲ್ ಗವಾಸ್ಕರ್ ಮತ್ತು ಇರ್ಫಾನ್ ಪಠಾಣ್ ಜೊತೆಗಿನ ಮಾತುಕತೆಯಲ್ಲಿ ರಾಹುಲ್ ನನಗೆ ಆಡುವ ಬಳಗದಲ್ಲಿ ಸ್ಥಾನ ಸಿಕ್ಕರೆ ಸಾಕು, ಯಾವ ಸ್ಥಾನವಾದರೂ ಆಡಲು ರೆಡಿ ಎಂದಿದ್ದಾರೆ. ರಾಹುಲ್ ರಂತಹ ಪ್ರತಿಭಾನ್ವಿತ, ಹಿರಿಯ ಆಟಗಾರನ ಈ ಮಾತು ತಂಡದಲ್ಲಿ ಎಷ್ಟು ಪೈಪೋಟಿಯಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.

‘ನಾನು 2014 ರಲ್ಲಿ ರಾಷ್ಟ್ರೀಯ ತಂಡಕ್ಕೆ ಪದಾರ್ಪಣೆ ಮಾಡಿದ್ದೆ. ಈಗ ನನಗೆ 31 ವರ್ಷ. ಆದರೆ ನನಗೆ ಅಷ್ಟೊಂದು ಪಂದ್ಯಗಳು ಸಿಕ್ಕಿಲ್ಲ. ನನಗೆ ಅವಕಾ ಸಿಕ್ಕಾಗ ಗಾಯದ ಕಾರಣದಿಂದ ಅನೇಕ ಬಾರಿ ಹೊರಗುಳಿದಿದ್ದು ಇದೆ. ಹೀಗಾಗಿ ನಾನೀಗ ತಂಡದಲ್ಲಿ ನನ್ನ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಯೋಚನೆ ಮಾಡುವ ಪರಿಸ್ಥಿತಿಯಲ್ಲಿಲ್ಲ. ನನಗೆ 4,5 ಅಥವಾ 6 ಯಾವುದೇ ಕ್ರಮಾಂಕವಾದರೂ ಸರಿ. ಆಡುವ ಬಳಗದಲ್ಲಿ ಸ್ಥಾನ ಸಿಕ್ಕರೆ ಮಾತ್ರ ಸಾಕು ಎಂದು ಯೋಚಿಸುತ್ತೇನೆ’ ಎಂದಿದ್ದಾರೆ.

ಇತ್ತೀಚೆಗೆ ಕೆಎಲ್ ರಾಹುಲ್ ವಿಕೆಟ್ ಕೀಪರ್ ಆಗಿಯೂ ಕರ್ತವ್ಯ ನಿರ್ವಹಿಸುತ್ತಿರುವುದರಿಂದ ತಂಡದಲ್ಲಿ ಅವರ ಸ್ಥಾನ ಖಚಿತವಾಗಿದೆ. ಕೇವಲ ಬ್ಯಾಟಿಗನಾಗಿದ್ದಾಗ ತಂಡದಲ್ಲಿ ಸ್ಥಾನ ಪಡೆದರೂ ಆಡುವ ಬಳಗದಲ್ಲಿ ಅವಕಾಶ ಪಡೆಯದೇ ಹೊರಗುಳಿದ ಎಷ್ಟೋ ಸಂದರ್ಭಗಳಿವೆ. ಅದೇ ಕಾರಣಕ್ಕೆ ಇತ್ತೀಚೆಗೆ ಮಾಧ‍್ಯಮಗೋಷ್ಠಿಯಲ್ಲೂ ಅವರು ನಾನು ಯಾವುದೇ ಕರ್ತವ್ಯ ನಿರ್ವಹಿಸಲೂ ಸಿದ್ಧ ಎಂದಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ