ಭಾರತ-ಬಾಂಗ್ಲಾ ಟೆಸ್ಟ್: ದ್ವಿಶತಕ ಗಳಿಸಿಯೂ ವಿರಾಟ್ ಕೊಹ್ಲಿ ಕನಸು ಈಡೇರಿಸದ ಮಯಾಂಕ್ ಅಗರ್ವಾಲ್!

ಶುಕ್ರವಾರ, 15 ನವೆಂಬರ್ 2019 (17:10 IST)
ಇಂಧೋರ್: ಅದ್ಭುತ ಫಾರ್ಮ್ ನಲ್ಲಿರುವ ಮಯಾಂಕ್ ಅಗರ್ವಾಲ್ ಐದೇ ಇನಿಂಗ್ಸ್ ಅವಧಿಯಲ್ಲಿ ಮತ್ತೊಂದು ದ್ವಿಶತಕ ಸಾಧನೆ ಮಾಡಿದ್ದಾರೆ. ಭಾರತ ಮತ್ತು ಬಾಂಗ್ಲಾ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ನ ದ್ವಿತೀಯ ದಿನ ಮಯಾಂಕ್ ತಮ್ಮ ಕೆರಿಯರ್ ನ ಎರಡನೇ ದ್ವಿಶತಕ ದಾಖಲಿಸಿದರು.


243 ರನ್ ಗಳಿಸಿ ಔಟಾದ ಮಯಾಂಕ್ ತ್ರಿಶತಕ ಭಾರಿಸುವ ಅಪೂರ್ವ ಅವಕಾಶವನ್ನು ಮಿಸ್ ಮಾಡಿಕೊಂಡರು. ದ್ವಿಶತಕ ಬಾರಿಸಿದ ತಕ್ಷಣ ಸೆಲೆಬ್ರೇಷನ್ ಮಾಡುವಾಗ ಡ್ರೆಸ್ಸಿಂಗ್ ರೂಂನಲ್ಲಿದ್ದ ನಾಯಕ ಕೊಹ್ಲಿ ಕಡೆಗೆ ಮಯಾಂಕ್ ಎರಡು ಬೆರಳು ತೋರಿಸಿ ದ್ವಿಶತಕ ಬಾರಿಸಿದೆ ಎಂದು ಸಂಭ್ರಮಿಸಿದ್ದರು. ಆಗ ಕೊಹ್ಲಿ ನಗುತ್ತಾ ಮೂರು ಬೆರಳು ತೋರಿಸಿ ತ್ರಿಶತಕದತ್ತ ಇನಿಂಗ್ಸ್ ಮುಂದುವರಿಸು ಎಂದು ನಗುತ್ತಲೇ ಸನ್ನೆ ಮಾಡಿ ಹುರಿದುಂಬಿಸಿದ್ದರು. ಆದರೆ ಮಯಾಂಕ್ 243 ರನ್ ಗೆ ಔಟಾಗಿ ಕೊಹ್ಲಿ ಕನಸು ನನಸು ಮಾಡದೇ ನಿರಾಸೆ ಮೂಡಿಸಿದರು.

ಹಾಗಿದ್ದರೂ ಮಯಾಂಕ್ ರ ಈ ಅದ್ಭುತ ಸಾಧನೆಯನ್ನು ಕ್ರಿಕೆಟ್ ಜಗತ್ತು ಕೊಂಡಾಡಿದೆ. ಒಟ್ಟು 330 ಎಸೆತ ಎದುರಿಸಿದ ಮಯಾಂಕ್ 28 ಬೌಂಡರಿ ಮತ್ತು 8 ಸಿಕ್ಸರ್ ಕೂಡಾ ಸಿಡಿಸಿದರು. ಇವರಿಗೆ ತಕ್ಕ ಜತೆ ನೀಡಿದ ಉಪನಾಯಕ ಅಜಿಂಕ್ಯಾ ರೆಹಾನೆ 86 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ದಿನದಂತ್ಯಕ್ಕೆ ರವೀಂದ್ರ ಜಡೇಜಾ 60 ಮತ್ತು ಉಮೇಶ್ ಯಾದವ್ 25 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ.

ದ್ವಿತೀಯ ದಿನದಂತ್ಯಕ್ಕೆ ಟೀಂ ಇಂಡಿಯಾ 6 ವಿಕೆಟ್ ನಷ್ಟಕ್ಕೆ 493 ರನ್ ಗಳಿಸಿದ್ದು 343 ರನ್ ಗಳ ಮುನ್ನಡೆ ಸಾಧಿಸಿದೆ. ಇಂದು ಒಂದೇ ದಿನ 400 ಪ್ಲಸ್ ರನ್ ಮಾಡಿದ ಭಾರತ ಆ ಮೂಲಕ ಒಂದೇ ದಿನ ಮೂರನೇ ಬಾರಿ 400 ಪ್ಲಸ್ ರನ್ ಮಾಡಿದ ಸಾಧನೆ ಮಾಡಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ