ಮುಂಬೈ: ಟೀಂ ಇಂಡಿಯಾ ಏಕದಿನ ವಿಶ್ವಕಪ್ ಹೀರೋ, ವೇಗಿ ಮೊಹಮ್ಮದ್ ಶಮಿ ಈ ಬಾರಿಯ ಐಪಿಎಲ್ ಕೂಟದಿಂದ ಹೊರಬಿದ್ದಿದ್ದಾರೆ. ಮುಂಬರುವ ಟಿ20 ವಿಶ್ವಕಪ್ ನಲ್ಲೂ ಆಡುವುದು ಅನುಮಾನವಾಗಿದೆ.
ಏಕದಿನ ವಿಶ್ವಕಪ್ ವೇಳೆಗೆ ಪಾದದ ನೋವಿಗೆ ತುತ್ತಾಗಿದ್ದ ಮೊಹಮ್ಮದ್ ಶಮಿ ಬಳಿಕ ಯಾವುದೇ ಸರಣಿಯಲ್ಲೂ ಪಾಲ್ಗೊಂಡಿಲ್ಲ. ಪುನಶ್ಚೇತನ ಕಾರ್ಯದಲ್ಲಿ ತೊಡಗಿಸಿಕೊಂಡರೂ ಇದುವರೆಗೆ ಫಿಟ್ನೆಸ್ ಮರಳಿ ಪಡೆದಿಲ್ಲ. ಸದ್ಯದ ಪರಿಸ್ಥಿತಿ ನೋಡಿದರೆ ಶಮಿಗೆ ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎನ್ನಲಾಗಿದೆ.
ಸದ್ಯದಲ್ಲಿಯೇ ಶಮಿ ಮಣಿಗಂಟಿನ ಶಸ್ತ್ರಚಿಕಿತ್ಸೆಗೊಳಗಾಗಲಿದ್ದಾರೆ. ಹೀಗಾದಲ್ಲಿ ಸದ್ಯಕ್ಕೆ ಅವರು ಸಕ್ರಿಯ ಕ್ರಿಕೆಟ್ ಗೆ ಬರಲು ಸಾಧ‍್ಯವಾಗುವುದಿಲ್ಲ. ಹೀಗಾಗಿ ಐಪಿಎಲ್ 2024 ರ ಕೂಟದಿಂದ ಅವರು ಹೊರಬಿದ್ದಿದ್ದಾರೆ. ಗುಜರಾತ್ ಟೈಟನ್ಸ್ ತಂಡದ ಸ್ಟಾರ್ ವೇಗಿಯಾಗಿರುವ ಮೊಹಮ್ಮದ್ ಶಮಿ ಕಳೆದ ಸೀಸನ್ ನಲ್ಲಿ 17 ಪಂದ್ಯಗಳಿಂದ 28 ವಿಕೆಟ್ ಕಬಳಿಸಿದ್ದರು. ಈ ಮೂಲಕ ಪರ್ಪಲ್ ಕ್ಯಾಪ್ ಗೌರವ ಪಡೆದಿದ್ದರು. ಆದರೆ ಈಗ ಅವರಿಲ್ಲದೇ ಗುಜರಾತ್ ಬೌಲಿಂಗ್ ಬಡವಾಗಲಿದೆ. ಈ ಸೀಸನ್ ನಲ್ಲಿ ಹಾರ್ದಿಕ್ ಪಾಂಡ್ಯ ಕೂಡಾ ಗುಜರಾತ್ ಬಿಟ್ಟು ಮುಂಬೈಗೆ ಮರಳಿದ್ದಾರೆ. ಹೀಗಾಗಿ ಶುಬ್ಮನ್ ಗಿಲ್ ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ. ಇದೀಗ ಸ್ಟಾರ್ ವೇಗಿಯ ಅನುಪಸ್ಥಿತಿ ಗುಜರಾತ್ ಗೆ ಹೊಡೆತ ನೀಡಲಿದೆ.
ಸದ್ಯದ ಪರಿಸ್ಥಿತಿ ನೋಡಿದರೆ ಕೇವಲ ಐಪಿಎಲ್ ಮಾತ್ರವಲ್ಲ, ಜೂನ್-ಜುಲೈ ತಿಂಗಳ ಅವಧಿಯಲ್ಲಿ ಟಿ20 ವಿಶ್ವಕಪ್ ನಡೆಯಲಿದೆ. ಈ ಟೂರ್ನಿಗೂ ಶಮಿ ಚೇತರಿಸಿಕೊಂಡು ತಂಡಕ್ಕೆ ಮರಳುವುದು ಅನುಮಾನವೆನ್ನಲಾಗುತ್ತಿದೆ. ಇದು ಅಭಿಮಾನಿಗಳಿಗೆ ನಿಜಕ್ಕೂ ನಿರಾಸೆ ಮೂಡಿಸಲಿದೆ.