ಅಹಮದಾಬಾದ್: ಮಯಂಕ್ ಅಗರವಾಲ್ ಸಾರಥ್ಯದ ಕರ್ನಾಟಕ ತಂಡವು 2024-25ರ ವಿಜಯ್ ಹಜಾರೆ ಟ್ರೋಫಿಯ ಮೊದಲ ಪಂದ್ಯದಲ್ಲಿ ಬಲಿಷ್ಠ ಮುಂಬೈ ತಂಡವನ್ನು ಹೀನಾಯವಾಗಿ ಮಣಿಸುವಲ್ಲಿಯಶಸ್ವಿಯಾಗಿದೆ.
ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನ ಬಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ನೀಡಿದ 382 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಕರ್ನಾಟಕ ತಂಡ ಇನ್ನು 22 ಎಸೆತಗಳು ಬಾಕಿ ಇರುವಂತೆಯೇ 3 ವಿಕೆಟ್ ಕಳೆದುಕೊಂಡು ಜಯ ಸಾಧಿಸಿತು.
ಕರ್ನಾಟಕದ ವಿಕೆಟ್ಕೀಪರ್ ಬ್ಯಾಟ್ಸ್ಮನ್ ಕೆ.ಎಲ್. ಶ್ರೀಜಿತ್ ಗೆಲುವಿನ ರೂವಾರಿಯಾದರು. ಶ್ರೀಜಿತ್ ಕೇವಲ 101 ಎಸೆತಗಳಲ್ಲಿ 20 ಬೌಂಡರಿ ಹಾಗೂ 4 ಸಿಕ್ಸರ್ಗಳ ಸಹಿತ ಅಜೇಯ 150 ರನ್‌ಗಳ ಇನ್ನಿಂಗ್ಸ್ ಆಡಿದರು.
ಉಭಯ ತಂಡಗಳ ನಡುವೆ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಕರ್ನಾಟಕ ತಂಡ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಇತ್ತ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಕೂಡ ಉತ್ತಮ ಬ್ಯಾಟಿಂಗ್ ಮಾಡಿತು. ತಂಡದ ಪರ ನಾಯಕತ್ವದ ಇನ್ನಿಂಗ್ಸ್ ಆಡಿದ ಶ್ರೇಯಸ್ ಅಯ್ಯರ್ 55 ಎಸೆತಗಳಲ್ಲಿ 114 ರನ್ ಗಳಿಸಿದರೆ, ಶಿವಂ ದುಬೆ ಕೂಡ ಕೇವಲ 36 ಎಸೆತಗಳಲ್ಲಿ ಅಜೇಯ 63 ರನ್ ಗಳಿಸಿದರು. ಈ ಕಾರಣದಿಂದಾಗಿ ಮುಂಬೈ ತಂಡವು 50 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 382 ರನ್ ಕಲೆಹಾಕಿತು.
ಕರ್ನಾಟಕದ ಉತ್ತಮ ಬ್ಯಾಟಿಂಗ್
ಈ ಗುರಿ ಬೆನ್ನಟ್ಟಿದ ಕರ್ನಾಟಕ ತಂಡದ ನಾಯಕ ಮಯಾಂಕ್ ಅಗರ್ವಾಲ್ ತಂಡಕ್ಕೆ ಉತ್ತಮ ಆರಂಭ ನೀಡಿದರು. ಅವರು 48 ಎಸೆತಗಳಲ್ಲಿ 47 ರನ್‌ಗಳ ಇನಿಂಗ್ಸ್ ಆಡಿದರು. ಮಯಾಂಕ್ಗೆ ಸಾಥ್ ನೀಡಿದ ಕೆವಿ ಅನೀಶ್ ಕೂಡ 82 ರನ್ ಕೊಡುಗೆ ನೀಡಿದರು. ಇದಾದ ಬಳಿಕ ಜೊತೆಯಾದ ಕೃಷ್ಣನ್ ಶ್ರೀಜಿತ್ ಮತ್ತು ಪ್ರವೀಣ್ ದುಬೆ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.