ಬೆಂಗಳೂರು: ಇತ್ತೀಚೆಗಷ್ಟೇ ವಿಮಾನ ಪ್ರಯಾಣ ವೇಳೆ ನೀರು ಕುಡಿದು ಅಸ್ವಸ್ಥರಾಗಿದ್ದ ಕರ್ನಾಟಕ ಕ್ರಿಕೆಟ್ ತಂಡದ ನಾಯಕ ಮಯಾಂಕ್ ಅಗರ್ವಾಲ್ ತಂಡಕ್ಕೆ ಮರಳಿದ್ದಾರೆ.
ಸೂರತ್ ಗೆ ವಿಮಾನ ಯಾನ ಮಾಡುವಾಗ ಮಯಾಂಕ್ ಕಲುಷಿತ ನೀರು ಸೇವಿಸಿ ವಿಮಾನದಲ್ಲೇ ಅಸ್ವಸ್ಥರಾಗಿದ್ದರು. ತಕ್ಷಣವೇ ಅವರನ್ನು ಅಗರ್ತಲಾದಲ್ಲಿ ಆಸ್ಪತ್ರೆಗೆ ದಾಖಲಿಸಿ ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಎರಡು ದಿನದ ಬಳಿಕ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿತ್ತು. ಹೀಗಾಗಿ ಕಳೆದ ರೈಲ್ವೇಸ್ ವಿರುದ್ಧದ ಪಂದ್ಯದಿಂದ ಅವರು ಹೊರಗುಳಿದಿದ್ದರು.
ಮಯಾಂಕ್ ಕಮ್ ಬ್ಯಾಕ್
ಇದೀಗ ಚೇತರಿಸಿಕೊಂಡಿರುವ ಮಯಾಂಕ್ ಮತ್ತೆ ತಂಡವನ್ನು ಕೂಡಿಕೊಂಡಿದ್ದಾರೆ. ಮುಂದಿನ ತಮಿಳುನಾಡು ವಿರುದ್ಧದ ಪಂದ್ಯಕ್ಕಾಗಿ 16 ಸದಸ್ಯರ ತಂಡ ಪ್ರಕಟಿಸಲಾಗಿದ್ದು ಮಯಾಂಕ್ ಮರಳಿ ತಂಡಕ್ಕೆ ವಾಪಸ್ ಆಗಿದ್ದಾರೆ. ಮತ್ತೆ ಅವರು ನಾಯಕರಾಗಿ ತಂಡ ಮುನ್ನಡೆಸಲಿದ್ದಾರೆ.
ಕೇವಲ ಮಯಾಂಕ್ ಮಾತ್ರವಲ್ಲ, ಮುಂದಿನ ಪಂದ್ಯಕ್ಕೆ ಕರ್ನಾಟಕ ತಂಡಕ್ಕೆ ಸ್ಟಾರ್ ಆಟಗಾರ ದೇವದತ್ತ್ ಪಡಿಕ್ಕಲ್ ಮತ್ತು ಕಾವೇರಪ್ಪ ಕೂಡಾ ವಾಪಸ್ ಆಗಿದ್ದಾರೆ. ಭಾರತ ಎ ತಂಡದ ಭಾಗವಾಗಿದ್ದ ಇವರು ಈಗ ಮತ್ತೆ ತಂಡ ಕೂಡಿಕೊಂಡಿದ್ದು, ಕರ್ನಾಟಕ ತಂಡ ಮತ್ತಷ್ಟು ಬಲಿಷ್ಠವಾಗಿದೆ.
ಫೆಬ್ರವರಿ 9 ರಿಂದ ಕರ್ನಾಟಕ ಮತ್ತು ತಮಿಳುನಾಡು ನಡುವೆ ಚೆನ್ನೈನ ಎಂ.ಎ. ಚಿದಂಬರಂ ಮೈದಾನದಲ್ಲಿ ರಣಜಿ ಟ್ರೋಫಿ ಪಂದ್ಯ ನಡೆಯಲಿದೆ. ದಕ್ಷಿಣ ಭಾರತದ ಎರಡು ಬಲಿಷ್ಠ ತಂಡಗಳ ನಡುವಿನ ಕಾದಾಟ ಕುತೂಹಲಕಾರಿಯಾಗಿರಲಿದೆ.