ಮುಂಬೈ: ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ವಿದರ್ಭ ವಿರುದ್ಧ 169 ರನ್ ಗಳ ಭರ್ಜರಿ ಗೆಲುವು ಸಾಧಿಸಿದ ಮುಂಬೈ ಕ್ರಿಕೆಟ್ ಟೀಂ 42 ನೇ ಬಾರಿಗೆ ರಣಜಿ ಟ್ರೋಫಿ ಮುಡಿಗೇರಿಸಿದೆ.
ಅಜಿಂಕ್ಯಾ ರೆಹಾನೆ ನೇತೃತ್ವದ ಮುಂಬೈ ತಂಡ ಫೈನಲ್ ಪಂದ್ಯದಲ್ಲಿ ಮೊದಲ ಇನಿಂಗ್ಸ್ ನಲ್ಲಿ 224 ಮತ್ತು ದ್ವಿತೀಯ ಇನಿಂಗ್ಸ್ ನಲ್ಲಿ 418 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ವಿದರ್ಭ ತಂಡ ಮೊದಲ ಇನಿಂಗ್ಸ್ ನಲ್ಲಿ 105 ಮತ್ತು ದ್ವಿತೀಯ ಇನಿಂಗ್ಸ್ ನಲ್ಲಿ 368 ರನ್ ಗಳಿಗೆ ಆಲೌಟ್ ಆಗುವ ಮೂಲಕ ಸೋಲೊಪ್ಪಿಕೊಂಡಿತು.
ಬಹುಶಃ ಮುಂಬೈ ಇಂದು ಬೆಳಗ್ಗಿನ ಅವಧಿಯಲ್ಲೇ ಗೆಲ್ಲುವ ಕನಸು ಕಂಡಿತ್ತು. ಆದರೆ ವಿದರ್ಭ ಪರ ಅತ್ಯುತ್ತಮ ಆಟವಾಡಿದ ಕರ್ನಾಟಕ ಮೂಲದ ಕರುಣ್ ನಾಯರ್ ಬರೋಬ್ಬರಿ 220 ಎಸೆತ ಎದುರಿಸಿ 74 ರನ್ ಗಳಿಸುವ ಮೂಲಕ ಮುಂಬೈ ಗೆಲುವು ತಡ ಮಾಡಿದರು. ಅವರಿಗೆ ಸಾಥ್ ನೀಡಿದ ನಾಯಕ ಅಕ್ಷಯ್ ವಾಡ್ಕರ್ 102, ಹರ್ಷ್ ದುಬೆ 65 ರನ್ ಗಳಿಸಿದರು.
ಈ ಮೂವರೂ ವಿದರ್ಭ ಸೋಲು ತಪ್ಪಿಸಲು ಇನ್ನಿಲ್ಲದಂತೆ ಹೆಣಗಾಡಿದರು. ಆದರೆ ಅಂತಿಮವಾಗಿ ತನುಷ್ ಕೋಟ್ಯಾನ್, ತುಷಾರ್ ದೇಶ್ ಪಾಂಡೆ ಮತ್ತು ಮುಶೀರ್ ಖಾನ್ ಎದುರಾಳಿಗಳನ್ನು ಆಲೌಟ್ ಮಾಡುವಲ್ಲಿ ಸಫಲರಾದದರು. ತನುಷ್ 4, ತುಷಾರ್ ಮತ್ತು ಮುಶೀರ್ ಖಾನ್ ತಲಾ 2 ವಿಕೆಟ್ ತಮ್ಮದಾಗಿಸಿಕೊಂಡರು. ಈ ಗೆಲುವಿನ ಮೂಲಕ ರಣಜಿ ಟ್ರೋಫಿಯಲ್ಲಿ ಮತ್ತೊಮ್ಮೆ ತಾನೇ ಪ್ರಬಲ ತಂಡ ಎಂದು ಮುಂಬೈ ನಿರೂಪಿಸಿದಂತಾಗಿದೆ.