ಎರಡನೇ ಇನಿಂಗ್ಸ್ ನಲ್ಲಿ ಬ್ಯಾಟಿಂಗ್ ನಲ್ಲಿ ಬಡ್ತಿ ಪಡೆದು ಕಣಕ್ಕಿಳಿದ ವಿಕೆಟ್ ಕೀಪರ್ ಬ್ಯಾಟಿಗ ಇಶಾನ್ ಕಿಶನ್ 34 ಎಸೆತಗಳಲ್ಲಿ ಅಜೇಯ 52 ರನ್ ಚಚ್ಚಿದರು. ಅವರ ಬ್ಯಾಟಿಂಗ್ ಶೈಲಿ ರಿಷಬ್ ಪಂತ್ ರನ್ನು ನೆನಪಿಸಿತ್ತು. ಟೆಸ್ಟ್ ಕ್ರಿಕೆಟ್ ನಲ್ಲಿ ರಿಷಬ್ ಪಂತ್ ಎಷ್ಟೋ ಬಾರಿ ಇಂತಹ ಇನಿಂಗ್ಸ್ ಆಡಿದ್ದಾರೆ. ವಿಶೇಷವೆಂದರೆ ಇಶಾನ್ ರಿಷಬ್ ಪಂತ್ ರ ಬ್ಯಾಟ್ ಬಳಸಿಯೇ ಈ ಇನಿಂಗ್ಸ್ ಆಡಿದ್ದಾರೆ! ಈ ಟೆಸ್ಟ್ ಸರಣಿಗೆ ಆಗಮಿಸುವ ಮುನ್ನ ಇಶಾನ್ ಬೆಂಗಳೂರಿನ ಎನ್ ಸಿಎನಲ್ಲಿ ಪುನಶ್ಚೇತನ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ರಿಷಬ್ ಪಂತ್ ರನ್ನು ಭೇಟಿಯಾಗಿದ್ದರಂತೆ. ಆಗ ಇಶಾನ್ ಗೆ ಕೆಲವು ಬ್ಯಾಟಿಂಗ್ ಟಿಪ್ಸ್ ಜೊತೆಗೆ ಬ್ಯಾಟನ್ನೂ ಉಡುಗೊರೆಯಾಗಿ ನೀಡಿದ್ದರಂತೆ. ನಿನ್ನೆ ಇದೇ ಬ್ಯಾಟ್ ಬಳಸಿ ಇಶಾನ್ ಅಬ್ಬರಿಸಿದ್ದು ವಿಶೇಷ!
ಇನ್ನು ಈ ಟೆಸ್ಟ್ ಪಂದ್ಯದಲ್ಲಿ ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ದಾಖಲೆಗಳ ಸುರಿಮಳೆಗೈಯ್ದರು. ಮೊದಲ ಟೆಸ್ಟ್ ಪಂದ್ಯದಲ್ಲಿ 12 ವಿಕೆಟ್ ಕಬಳಿಸಿದ್ದ ಅಶ್ವಿನ್ ನಿನ್ನೆ ವಿಂಡೀಸ್ ದ್ವಿತೀಯ ಇನಿಂಗ್ಸ್ ನಲ್ಲಿ ಎರಡೂ ವಿಕೆಟ್ ಗಳನ್ನು ತಮ್ಮದಾಗಿಸಿಕೊಂಡಿದ್ದರು. ಇದರೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅವರ ವಿಕೆಟ್ ಗಳಿಕೆ 712 ಕ್ಕೇರಿದ್ದು, ಹರ್ಭಜನ್ ಅವರ 711 ವಿಕೆಟ್ ಗಳ ದಾಖಲೆ ಮುರಿದಿದ್ದಾರೆ. ಇದರೊಂದಿಗೆ ಅವರು ಭಾರತದ ಪರ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅತ್ಯಧಿಕ ವಿಕೆಟ್ ಪಡೆದ ಬೌಲರ್ ಗಳ ಪಟ್ಟಿಯಲ್ಲಿ ಅನಿಲ್ ಕುಂಬ್ಳೆ ನಂತರ ಎರಡನೇ ಸ್ಥಾನಕ್ಕೇರಿದರು. ಅಲ್ಲದೆ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಕ್ರಿಕೆಟ್ ನಲ್ಲಿ ಭಾರತದ ಪರ ಅತ್ಯಧಿಕ ವಿಕೆಟ್ ಪಡೆದ ಬೌಲರ್ ಗಳ ಪಟ್ಟಿಯಲ್ಲೂ ಎರಡನೇ ಸ್ಥಾನಕ್ಕೇರಿದರು. ಅಶ್ವಿನ್ ಟೆಸ್ಟ್ ವಿಕೆಟ್ ಗಳ ಸಂಖ್ಯೆ 75 ಆಗಿದೆ. 89 ವಿಕೆಟ್ ಪಡೆದಿರುವ ಕಪಿಲ್ ದೇವ್ ಮೊದಲ ಸ್ಥಾನದಲ್ಲಿದ್ದಾರೆ. ಅಲ್ಲದೆ ರವೀಂದ್ರ ಜಡೇಜಾ ಜೊತೆಗೂಡಿ ಟೆಸ್ಟ್ ಕ್ರಿಕೆಟ್ ನಲ್ಲಿ ಭಾರತದ ಪರ 500 ವಿಕೆಟ್ ಕಬಳಿಸಿದ ಅಪರೂಪದ ದಾಖಲೆಯನ್ನೂ ಅವರು ಮಾಡಿದ್ದಾರೆ.