255 ಕ್ಕೆ ವೆಸ್ಟ್ ಇಂಡೀಸ್ ಆಲೌಟ್: ಸ್ಪೋಟಕ ಬ್ಯಾಟಿಂಗ್ ಆರಂಭಿಸಿರುವ ರೋಹಿತ್-ಜೈಸ್ವಾಲ್
ಭಾನುವಾರ, 23 ಜುಲೈ 2023 (20:27 IST)
ಪೋರ್ಟ್ ಆಫ್ ಸ್ಪೇನ್: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ದ್ವಿತೀಯ ಟೆಸ್ಟ್ ಪಂದ್ಯ ರೋಚಕ ಘಟ್ಟ ತಲುಪಿದೆ. ನಾಲ್ಕನೇ ದಿನವಾದ ಇಂದು ಮೊದಲ ಇನಿಂಗ್ಸ್ ನಲ್ಲಿ ವಿಂಡೀಸ್ 255 ರನ್ ಗಳಿಗೆ ಆಲೌಟ್ ಆಗಿದೆ.
ನಿನ್ನೆ 5 ವಿಕೆಟ್ ನಷ್ಟಕ್ಕೆ 229 ರನ್ ಗಳಿಸಿ ದಿನದಾಟ ಮುಗಿಸಿತ್ತು. ಇಂದು 255 ರನ್ ಗಳಿಗೆ ವಿಂಡೀಸ್ ಆಲೌಟ್ ಆಯಿತು. ಇದರೊಂದಿಗೆ ಟೀಂ ಇಂಡಿಯಾ 183 ರನ್ ಗಳ ಬೃಹತ್ ಮುನ್ನಡೆ ದೊರೆಯಿತು. ಇಂದಿನ ದಿನದಾಟದಲ್ಲಿ ವೇಗಿಗಳದ್ದೇ ಕಾರುಬಾರು. ಮೊಹಮ್ಮದ್ ಸಿರಾಜ್ ಒಟ್ಟು 5 ವಿಕೆಟ್ ಗಳ ಗೊಂಚಲು ಪಡೆದರೆ ಮುಕೇಶ್ ಕುಮಾರ್, ರವೀಂದ್ರ ಜಡೇಜಾ ತಲಾ 2, ರವಿಚಂದ್ರನ್ ಅಶ್ವಿನ್ 1 ವಿಕೆಟ್ ಕಬಳಿಸಿದರು.
ಇದೀಗ ಭಾರತಕ್ಕೆ ವೇಗವಾಗಿ ರನ್ ಗಳಿಸಿ ವೆಸ್ಟ್ ಇಂಡೀಸ್ ಗೆ ಪೈಪೋಟಿದಾಯಕ ಗುರಿ ನೀಡಬೇಕಿದೆ. ಹೀಗಾಗಿ ಬಿರುಸಿನ ಆಟಕ್ಕೆ ಕೈ ಹಾಕಿರುವ ಟೀಂ ಇಂಡಿಯಾ ಆರಂಭಿಕರಾದ ರೋಹಿತ್ ಶರ್ಮಾ-ಜೈಸ್ವಾಲ್ ಜೋಡಿ 4 ಓವರ್ ಗಳಲ್ಲಿ 41 ರನ್ ಸಿಡಿಸಿದೆ. ರೋಹಿತ್ 16 ಎಸೆತಗಳಿಂದ 25 ರನ್ ಗಳಿಸಿದ್ದರೆ ಜೈಸ್ವಾಲ್ 10 ಎಸೆತಗಳಿಂದ 15 ರನ್ ಗಳಿಸಿದ್ದಾರೆ. ಇದೀಗ ಭಾರತದ ಮೊತ್ತ ವಿಕೆಟ್ ನಷ್ಟವಿಲ್ಲದೇ 43 ಆಗಿದೆ. ಇದರೊಂದಿಗೆ 226 ರನ್ ಗಳ ಮುನ್ನಡೆ ಸಾಧಿಸಿದೆ.