ಮುಂಬೈ: ಈ ಬಾರಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಬಿಟ್ಟು ಕೆಎಲ್ ರಾಹುಲ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೇರಿಕೊಳ್ಳಲಿದ್ದಾರೆ ಎಂಬ ಮಾತು ದಟ್ಟವಾಗಿತ್ತು. ಆದರೆ ಮೊನ್ನೆಯಷ್ಟೇ ಲಕ್ನೋ ಮಾಲಿಕರನ್ನು ರಾಹುಲ್ ಭೇಟಿಯಾದ ಬಳಿಕ ಅದೆಲ್ಲಾ ಸುಳ್ಳು ಎನಿಸುತ್ತಿದೆ.
ಲಕ್ನೋ ಮಾಲಿಕ ಸಂಜೀವ್ ಗೊಯೆಂಕಾ ಕಳೆದ ಸೀಸನ್ ನಲ್ಲಿ ಮೈದಾನದಲ್ಲಿಯೇ ರಾಹುಲ್ ಗೆ ಬೈದಿದ್ದು ಭಾರೀ ಸುದ್ದಿಯಾಗಿತ್ತು. ಹೀಗಾಗಿ ಈ ಬಾರಿ ರಾಹುಲ್ ಲಕ್ನೋ ತಂಡ ಬಿಡಬಹುದು ಎಂದೇ ಎಲ್ಲರೂ ಲೆಕ್ಕಾಚಾರ ಹಾಕಿದ್ದರು. ಇದರಿಂದಾಗಿ ಅವರು ಆರ್ ಸಿಬಿ ಸೇರಿಕೊಳ್ಳುವ ವದಂತಿಗಳು ದಟ್ಟವಾಗಿತ್ತು.
ಆದರೆ ಮೊನ್ನೆ ಲಕ್ನೋ ಮಾಲಿಕ ಸಂಜೀವ್ ಗೊಯೆಂಕಾರನ್ನು ಭೇಟಿ ಮಾಡಿದ್ದ ಕೆಎಲ್ ರಾಹುಲ್ ಈ ತಂಡದಲ್ಲಿಯೇ ಉಳಿದುಕೊಳ್ಳಲು ಬಯಸಿರುವುದಾಗಿ ತಿಳಿಸಿದ್ದಾರಂತೆ. ನಾನು ರಿಲೀಸ್ ಆಗಲು ಇಷ್ಟಪಡಲ್ಲ ಎಂದು ಸ್ಪಷ್ಟ ಸಂದೇಶ ನೀಡಿದ್ದಾರಂತೆ. ಹೀಗಾಗಿ ರಾಹುಲ್ ಈ ಬಾರಿಯೂ ಲಕ್ನೋದಲ್ಲಿಯೇ ಉಳಿದುಕೊಳ್ಳುವ ಸಾಧ್ಯತೆ ಹೆಚ್ಚು ಎನ್ನಲಾಗಿದೆ.
ಇನ್ನು ಅವರನ್ನು ತಂಡಕ್ಕೆ ಬನ್ನಿ ಎಂದು ಕರೆಯುತ್ತಿದ್ದ ಆರ್ ಸಿಬಿ ಫ್ಯಾನ್ಸ್ ಕರೆಗೆ ಕ್ಯಾರೇ ಎನ್ನದೇ ರಾಹುಲ್ ಲಕ್ನೋದಲ್ಲಿ ಉಳಿದುಕೊಳ್ಳುವ ನಿರ್ಧಾರ ಮಾಡಿದ್ದಾರೆ. ಕರ್ನಾಟಕ ಮೂಲದ ರಾಹುಲ್ ಇನ್ನೂ ಅಧಿಕೃತ ಪ್ರಕಟಣೆ ಹೊರಡಿಸಿಲ್ಲ. ಹೀಗಾಗಿ ಅಭಿಮಾನಿಗಳಲ್ಲಿ ಈಗಲೂ ಆಶಾಭಾವನೆಯಿದೆ.