ಮುಂಬೈ: ಮುಂಬರುವ ಟಿ20 ವಿಶ್ವಕಪ್ ತಂಡಕ್ಕೆ ರಿಂಕು ಸಿಂಗ್ ಆಯ್ಕೆಯಾಗುತ್ತಾರೆಂದು ಅವರ ತಂದೆ ಮನೆಗೆ ಸ್ವೀಟ್, ಪಟಾಕಿ ತಂದಿಟ್ಟಿದ್ದರಂತೆ. ಆದರೆ ಮಗ ಕೇವಲ ಮೀಸಲು ಆಟಗಾರನಾಗಿ ತಂಡದಲ್ಲಿ ಸ್ಥಾನ ಪಡೆದಿದ್ದು ಅವರಿಗೆ ಬೇಸರ ತಂದಿದೆ.
ತೀರಾ ಬಡತನದಲ್ಲಿ ಬೆಳೆದಿದ್ದ ರಿಂಕು ಸಿಂಗ್ ಇಂದು ಕ್ರಿಕೆಟಿಗನಾಗಿ ಸಾಧನೆ ಮಾಡಿದ್ದಾರೆ. ಅವರ ತಂದೆ ಖಾನ್ಚಂದ್ರ ಸಿಂಗ್ ಗೆ ಮಗ ಟಿ20 ವಿಶ್ವಕಪ್ ಗೆ ತಂಡದಲ್ಲಿ ಸ್ಥಾನ ಪಡೆಯುತ್ತಾರೆ ಎಂಬ ನಂಬಿಕೆಯಿತ್ತು. ಅದೇ ಕಾರಣಕ್ಕೆ ಮನೆಗೆ ಮೊದಲೇ ಸಿಹಿ ತಿನಿಸು, ಪಟಾಕಿ ತಂದಿಟ್ಟಿದ್ದರು.
ಮಗ ಆಯ್ಕೆಯಾದ ಸುದ್ದಿ ಹೊರಬೀಳುತ್ತಲೇ ಪಟಾಕಿ ಹಚ್ಚಿ, ಸಿಹಿ ತಿನಿಸು ಹಂಚಿ ಸಂಭ್ರಮಿಸಲು ತಯಾರಿ ಮಾಡಿಕೊಂಡಿದ್ದರು. ಆದರೆ 15 ಸದಸ್ಯರ ಪಟ್ಟಿಯಲ್ಲಿ ಮಗನ ಹೆಸರೇ ಇರಲಿಲ್ಲ. ಭಾವುಕರಾದ ಖಾನ್ಚಂದ್ರ ಸಿಂಗ್ ನಮಗೆ ಇದರಿಂದ ತೀರಾ ಬೇಸರವಾಗಿದೆ ಎಂದಿದ್ದಾರೆ.
ರಿಂಕು ಸಿಂಗ್ ಗೆ ಇನ್ನೂ ಅವಕಾಶದ ಬಾಗಿಲು ಮುಚ್ಚಿಲ್ಲ. ಮೀಸಲು ಆಟಗಾರನಾಗಿ ಅವರು ಟಿ20 ವಿಶ್ವಕಪ್ ತಂಡದೊಂದಿಗೆ ಅಮೆರಿಕಾ, ವೆಸ್ಟ್ ಇಂಡೀಸ್ ಗೆ ಪ್ರಯಾಣ ಬೆಳೆಸಲಿದ್ದಾರೆ. ಒಂದು ವೇಳೆ ಯಾರಾದರೂ ಗಾಯಗೊಂಡರೆ ರಿಂಕುಗೆ ತಂಡದಲ್ಲಿ ಅವಕಾಶ ಸಿಗಲಿದೆ.