ಮುಂಬೈ: ಮುಂಬರುವ ಟಿ20 ವಿಶ್ವಕಪ್ ಗೆ ಟೀಂ ಇಂಡಿಯಾ ಪ್ರಕಟವಾಗಿದ್ದು, ಕೆಎಲ್ ರಾಹುಲ್ ಗೆ ಕೊಕ್ ನೀಡಿರುವ ನಿರ್ಧಾರಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ಕೆಎಲ್ ರಾಹುಲ್ ಅನೇಕ ಬಾರಿ ಭಾರತ ತಂಡಕ್ಕೆ ಆಪತ್ ಬಾಂಧವನೆಂತೆ ಆಡಿದ್ದಾರೆ. ಅಷ್ಟೇ ಯಾಕೆ, ಇತ್ತೀಚೆಗೆ ಏಕದಿನ ವಿಶ್ವಕಪ್ ಫೈನಲ್ ನಲ್ಲೂ ಉಳಿದೆಲ್ಲಾ ಬ್ಯಾಟಿಗರು ವಿಫಲರಾಗಿದ್ದಾಗ ರಾಹುಲ್ ಏಕಾಂಗಿಯಾಗಿ ಹೋರಾಡಿ ತಂಡಕ್ಕೆ ಗೌರವಯುತ ಮೊತ್ತ ಕೊಡಿಸಿದ್ದರು.
ಕಳೆದ ಏಕದಿನ ವಿಶ್ವಕಪ್ ನಲ್ಲಿ ವಿಕೆಟ್ ಕೀಪರ್ ಆಗಿ ಅವರ ಜಾಣ್ಮೆ, ಬ್ಯಾಟಿಗನಾಗಿ ಅವರ ಆಟ ಭಾರತೀಯ ಅಭಿಮಾನಿಗಳು ಯಾವತ್ತೂ ಮರೆಯುವಂತಿಲ್ಲ. ಆದರೆ ಇದೀಗ ಟಿ20 ವಿಶ್ವಕಪ್ ಗೆ ಅವರನ್ನು ಕಡೆಗಣಿಸಿ ಫಾರ್ಮ್ ನಲ್ಲಿಲ್ಲದ ಹಾರ್ದಿಕ್ ಪಾಂಡ್ಯಗೆ ಅವಕಾಶ ನೀಡಿದ್ದು ಎಲ್ಲರ ಆಕ್ರೋಶ ವ್ಯಕ್ತವಾಗಿದೆ.
ಕೆಎಲ್ ರಾಹುಲ್ ಟೀಂ ಇಂಡಿಯಾದ ಹಿರಿಯ ಆಟಗಾರ. ಅವರಿಗೆ ಅಪಾರ ಅನುಭವವಿದೆ. ಅವರನ್ನು ತಂಡದಿಂದ ಕೈ ಬಿಟ್ಟಿದ್ದರಿಂದ ತಂಡಕ್ಕೆ ದೊಡ್ಡ ನಷ್ಟವಾಗಿದೆ ಎಂಬುದು ಫ್ಯಾನ್ಸ್ ಅಭಿಪ್ರಾಯವಾಗಿದೆ. ಸಂಜು ಸ್ಯಾಮ್ಸನ್ ಗೆ ಅವಕಾಶ ನೀಡಿರುವುದು ಓಕೆ, ಆದರೆ ರಾಹುಲ್ ರಂತಹ ಉಪಯುಕ್ತ ಆಟಗಾರನನ್ನು ಕೈ ಬಿಟ್ಟಿರುವುದು ಮೂರ್ಖತನ ಎಂದು ಫ್ಯಾನ್ಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.