ಜನ್ಮದಿನದ ಸಂಭ್ರಮದಲ್ಲಿ ಸೂರ್ಯಕುಮಾರ್ ಯಾದವ್: ನಾಳೆ ಸಿಗುತ್ತಾ ಗಿಫ್ಟ್?!

ಗುರುವಾರ, 14 ಸೆಪ್ಟಂಬರ್ 2023 (08:40 IST)
Photo Courtesy: Twitter
ಕೊಲೊಂಬೊ: ಟೀಂ ಇಂಡಿಯಾ ಬ್ಯಾಟಿಗ ಸೂರ್ಯಕುಮಾರ್ ಯಾದವ್ ಇಂದು ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಏಷ್ಯಾ ಕಪ್ ನಲ್ಲಿ ಟೀಂ ಇಂಡಿಯಾ ಭಾಗವಾಗಿರುವ ಎಸ್ ಕೆ ವೈ ಇದುವರೆಗೆ ಆಡುವ ಅವಕಾಶ ಪಡೆದಿಲ್ಲ.

33 ವರ್ಷದ ಸೂರ್ಯಕುಮಾರ್ ಯಾದವ್ ಟೀಂ ಇಂಡಿಯಾಗೆ ಕಾಲಿಟ್ಟಿದ್ದು 2021 ರಲ್ಲಿ. ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡುವಾಗ ಕೊಹ್ಲಿಯಿಂದ ಸ್ಲೆಡ್ಜಿಂಗ್ ಗೊಳಗಾಗಿದ್ದ ಸೂರ್ಯ ಬಳಿಕ ಹೊಡೆಬಡಿಯ ಆಟದಿಂದ ಗಮನ ಸೆಳೆದಿದ್ದರು. ಇದರ ಬೆನ್ನಲ್ಲೇ ಟೀಂ ಇಂಡಿಯಾ ಸೀಮಿತ ಓವರ್ ಗಳ ಪಂದ್ಯಕ್ಕೆ ಆಯ್ಕೆಯಾಗಿದ್ದರು. ಇತ್ತೀಚೆಗಷ್ಟೇ ಟೆಸ್ಟ್ ಗೆ ಪದಾರ್ಪಣೆ ಮಾಡಿದ್ದರೂ ಗಮನ ಸೆಳೆಯುವಂತಹ ಪ್ರದರ್ಶನ ನೀಡಿರಲಿಲ್ಲ.

ಎಬಿಡಿ ವಿಲಿಯರ್ಸ್ ಬಳಿಕ 360 ಡಿಗ್ರಿ ಹೊಡೆತಗಳ ಆಟಗಾರ ಎಂಬ ಖ್ಯಾತಿಗೆ ಪಾತ್ರರಾಗಿರುವ ಸೂರ್ಯ ಇದುವರೆಗೆ ಟಿ20 ಯಲ್ಲಿ 3 ಶತಕ ಗಳಿಸಿದ್ದಾರೆ. ಕಿರು ಮಾದರಿಗೆ ಹೇಳಿ ಮಾಡಿಸಿದ ಆಟಗಾರ ಸೂರ್ಯ ಏಕಾಂಗಿಯಾಗಿ ಪಂದ್ಯ ಗೆಲ್ಲಿಸುವ ಸಾಮರ್ಥ್ಯವಿರುವ ಆಟಗಾರ. ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಗೆ ಆಯ್ಕೆಯಾಗಿದ್ದರೂ ಇದುವರೆಗೆ ಅಧಿಕೃತವಾಗಿ ಆಡುವ ಬಳಗದಲ್ಲಿ ಸ್ಥಾನ ಪಡೆದಿಲ್ಲ. ಆದರೆ ಕಳೆದ ಎರಡು ಪಂದ್ಯಗಳಲ್ಲಿ ಬುಮ್ರಾ ಬದಲಿಗೆ ಬದಲಿ ಆಟಗಾರನಾಗಿ ಫೀಲ್ಡಿಂಗ್ ಮಾಡಿ ಮಹತ್ವದ ಕ್ಯಾಚ್ ಪಡೆದು ಗಮನ ಸೆಳೆದಿದ್ದಾರೆ. ನಾಳೆ ಭಾರತ-ಬಾಂಗ್ಲಾ ನಡುವೆ ಅಂತಿಮ ಸೂಪರ್ ಫೋರ್ ಪಂದ್ಯವಿದ್ದು, ಈ ಪಂದ್ಯ ಭಾರತದ ಪಾಲಿಗೆ ಔಪಚಾರಿಕವಾಗಿದೆ. ಹೀಗಾಗಿ ನಾಳೆಯ ಪಂದ್ಯದಲ್ಲಿ ಹಿರಿಯರಿಗೆ ವಿಶ್ರಾಂತಿ ನೀಡಿ ಸೂರ್ಯಗೆ ಅವಕಾಶ ನೀಡುವ ಮೂಲಕ ಬರ್ತ್ ಡೇ ಗಿಫ್ಟ್ ನೀಡುವ ಸಾಧ‍್ಯತೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ