ಮುಂಬೈ: ಮುಂಬರುವ ಟಿ20 ವಿಶ್ವಕಪ್ ನಿಂದ ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿಯನ್ನು ಹೊರಗಿಡಲಾಗುತ್ತಿದೆ ಎಂಬ ವರದಿಗಳ ಬಗ್ಗೆ ಆಯ್ಕೆ ಸಮಿತಿ ಮಾಜಿ ಮುಖ್ಯಸ್ಥ ಕೆ. ಶ್ರೀಕಾಂತ್ ಪ್ರತಿಕ್ರಿಯಿಸಿದ್ದಾರೆ.
ಮುಂಬರುವ ಟಿ20 ವಿಶ್ವಕಪ್ ನಡೆಯುವ ಪಿಚ್ ಗಳು ನಿಧಾನಗತಿಯ ಪಿಚ್ ಗಳಾಗಿರುವುದರಿಂದ ಅದಕ್ಕೆ ಕೊಹ್ಲಿ ಬ್ಯಾಟಿಂಗ್ ಸೂಕ್ತವಲ್ಲ ಎಂಬ ಕಾರಣಕ್ಕೆ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಕೊಹ್ಲಿಗೇ ಕೊಕ್ ನೀಡಲು ನಿರ್ಧರಿಸಿದ್ದಾರೆ ಎಂದು ಕೆಲವು ದಿನದ ಹಿಂದೆ ವರದಿಯಾಗಿತ್ತು.
ಕೊಹ್ಲಿಯನ್ನು ಟಿ20 ವಿಶ್ವಕಪ್ ನಿಂದ ಹೊರಗಿಡಲಾಗುತ್ತದೆ ಎಂಬ ವರದಿಗಳು ಬರುತ್ತಿದ್ದಂತೇ ಅವರ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಪಾಕ್ ಮಾಜಿ ಕ್ರಿಕೆಟಿಗ ದನೇಶ‍್ ಕನೇರಿಯಾ ಕೂಡಾ ಕೊಹ್ಲಿಯನ್ನು ಹೊರಗಿಡಲು ನಿಮಗೆ ಹೇಗೆ ಮನಸ್ಸಾಗುತ್ತದೆ ಎಂದು ಪ್ರಶ್ನಿಸಿದ್ದರು.
ಇದೀಗ ಈ ಬಗ್ಗೆ ಪ್ರತಿಕ್ರಿಯಿಸಿರುವ ಕೆ. ಶ್ರೀಕಾಂತ್, ಕೊಹ್ಲಿಯಿಲ್ಲದೇ ಟಿ20 ವಿಶ್ವಕಪ್ ಗೆಲ್ಲಲು ಸಾಧ‍್ಯವಾಗದು. 2022 ರ ಟಿ20 ವಿಶ್ವಕಪ್ ನಲ್ಲಿ ನಮ್ಮ ತಂಡ ಸೆಮಿಫೈನಲ್ ಗೇರಿದ್ದೇ ಅವರಿಂದ. ಅವರು ಆ ಟೂರ್ನಮೆಂಟ್ ನ ಮ್ಯಾನ್ ಆಫ್ ದಿ ಸೀರೀಸ್ ಆಗಿದ್ದವರು. ಇಂತಹ ಆಧಾರರಹಿತ ಸುದ್ದಿಗಳನ್ನೆಲ್ಲಾ ಯಾರು ಹರಡುತ್ತಿದ್ದಾರೆ? ಅವರಿಗೆ ಬೇರೆ ಕೆಲಸವಿಲ್ಲವೇ? ಭಾರತ ಟಿ20 ವಿಶ್ವಕಪ್ ಗೆಲ್ಲಬೇಕಾದರೆ ಕೊಹ್ಲಿ ಇರಲೇಬೇಕು ಎಂದಿದ್ದಾರೆ.