T20 World Cup 2024: ವಿರಾಟ್ ಕೊಹ್ಲಿ ಆಯಾ, ಗಯಾ.. ಗುಡ್ ಬೈ..

Krishnaveni K

ಗುರುವಾರ, 13 ಜೂನ್ 2024 (09:37 IST)
Photo Credit: Facebook
ನ್ಯೂಯಾರ್ಕ್: ಟಿ20 ವಿಶ್ವಕಪ್ 2024 ರಲ್ಲಿ ಇದುವರೆಗೆ ಆಡಿದ ಮೂರೂ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಆರಂಭಿಕರಾಗಿ ಕಣಕ್ಕಿಳಿದು ವೈಫಲ್ಯ ಅನುಭವಿಸಿದ್ದಾರೆ. ಇದಕ್ಕಾಗಿ ಅವರು ಈಗ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗಿದ್ದಾರೆ.

ಟಿ20 ವಿಶ್ವಕಪ್ 2024 ರಲ್ಲಿ ವಿರಾಟ್ ಕೊಹ್ಲಿ ಆರಂಭಿಕರಾಗಿ ರೋಹಿತ್ ಶರ್ಮಾ ಜೊತೆ ಕಣಕ್ಕಿಳಿಯುತ್ತಿದ್ದಾರೆ. ಇದುವರೆಗೆ ಭಾರತ ಆಡಿದ ಎಲ್ಲಾ ಪಂದ್ಯಗಳೂ ನ್ಯೂಯಾರ್ಕ್ ಮೈದಾನದಲ್ಲೇ ನಡೆದಿದೆ. ಐರ್ಲೆಂಡ್, ಪಾಕಿಸ್ತಾನ ಮತ್ತು ಯುಎಸ್ ಎ ವಿರುದ್ಧ ಭಾರತ ಪಂದ್ಯಗಳನ್ನಾಡಿದೆ.

ಈ ಎಲ್ಲಾ ಪಂದ್ಯಗಳಲ್ಲಿ ಕೊಹ್ಲಿ ಗಳಿಸಿದ್ದು ಕ್ರಮವಾಗಿ 1, 4 ಮತ್ತು 0. ಅಂದರೆ ಕಳೆದ ಮೂರು ಪಂದ್ಯಗಳಿಂದ ಅವರು ಗಳಿಸಿದ್ದು ಕೇವಲ 5 ರನ್. ಆರಂಭದಲ್ಲೇ ವಿಕೆಟ್ ಕಳೆದುಕೊಳ್ಳುವುದರಿಂದ ಕೊಹ್ಲಿ ಮಾತ್ರವಲ್ಲ, ತಂಡವೂ ಒತ್ತಡಕ್ಕೆ ಸಿಲುಕುತ್ತಿದೆ. ಹೀಗಾಗಿ ಫ್ಯಾನ್ಸ್, ಮಾಜಿ ಕ್ರಿಕೆಟಿಗರು ಕೊಹ್ಲಿ ಫಾರ್ಮ್ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ವಿರಾಟ್ ಕೊಹ್ಲಿ ಬಂದ ಪುಟ್ಟ ಹೋದ ಪುಟ್ಟ ಎಂದು ಮಾಡುತ್ತಿದ್ದರೆ ಅವರನ್ನು ಮತ್ತೆ ಮತ್ತೆ ಆರಂಭಿಕರಾಗಿಯೇ ಕಣಕ್ಕಿಳಿಸುವುದು ಯಾಕೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಐಪಿಎಲ್ ನಲ್ಲಿ ಮಾತ್ರ ಟಿ20 ಮಾದರಿಯಲ್ಲಿ ಆರಂಭಿಕರಾಗಿ ಕಣಕ್ಕಿಳಿಯುವ ಕೊಹ್ಲಿ ರಾಷ್ಟ್ರೀಯ ತಂಡದ ಪರ ಆರಂಭಿಕರಾಗಿದ್ದು ಅಪರೂಪ. ಆದರೆ ಈ ಟಿ20 ವಿಶ್ವಕಪ್ ನಲ್ಲಿ ಅವರನ್ನು ಆರಂಭಿಕರಾಗಿ ಕಣಕ್ಕಿಳಿಸಿ ರಿಷಬ್ ಪಂತ್ ರನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಸಲಾಗುತ್ತಿದೆ. ಇದರಿಂದ ಯಾವುದೇ ಪ್ರಯೋಜನವಾಗುತ್ತಿಲ್ಲ. ಹೀಗಾಗಿ ಅವರನ್ನು ಮತ್ತೆ ಮೂರನೇ ಕ್ರಮಾಂಕಕ್ಕೇ ಕಳುಹಿಸಿ ಎಂದು ಆಗ್ರಹ ಕೇಳಿಬಂದಿದೆ. ಇನ್ನು ನೆಟ್ಟಿಗರಂತೂ ಕೊಹ್ಲಿ ಫಾರ್ಮ್ ನ್ನು ಇನ್ನಿಲ್ಲದಂತೆ ಟ್ರೋಲ್ ಮಾಡುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ