ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿ ಗೆಲ್ಲಲು ಹೊರಟ ಟೀಂ ಇಂಡಿಯಾಕ್ಕೆ ಈಗ ಅಂಪಾಯರ್ ದೊಡ್ಡ ಶತ್ರು!

ಮಂಗಳವಾರ, 5 ಡಿಸೆಂಬರ್ 2023 (11:10 IST)
ಮುಂಬೈ: ದ.ಆಫ್ರಿಕಾ ಪ್ರವಾಸದಲ್ಲಿ ಟೀಂ ಇಂಡಿಯಾ ಎರಡು ಟೆಸ್ಟ್ ಪಂದ್ಯಗಳನ್ನಾಡಲಿದ್ದು, ಈಗಾಗಲೇ ರೋಹಿತ್ ಶರ್ಮಾ ನೇತೃತ್ವದ ತಂಡ ಪ್ರಕಟಿಸಲಾಗಿದೆ.

ಆದರೆ ಟೆಸ್ಟ್ ಸರಣಿಯಲ್ಲಿ ಭಾರತಕ್ಕೆ ಎದುರಾಳಿಗಿಂತಲೂ ದೊಡ್ಡ ಕಂಟಕ ಅಂಪಾಯರ್ ರೂಪದಲ್ಲಿ ಎದುರಾಗಿದೆ. ಈ ಎರಡೂ ಟೆಸ್ಟ್ ಪಂದ್ಯಗಳಿಗೆ ಭಾರತಕ್ಕೆ ದುರಾದೃಷ್ಟ ಎಂದೇ ಪರಿಗಣಿತವಾಗಿರುವ ರಿಚರ್ಡ್ ಕೆಟಲ್ ಬರೊ ಅಂಪಾಯರ್ ಆಗಿ ನೇಮಕವಾಗಿದ್ದಾರೆ.

ಭಾರತ ಇದುವರೆಗೆ ಆಫ್ರಿಕಾ ನೆಲದಲ್ಲಿ ಟೆಸ್ಟ್ ಸರಣಿ ಗೆದ್ದಿಲ್ಲ. ಕಳೆದ ಬಾರಿಯೂ ಸೋತು ಬಂದಿತ್ತು. ಈ ಬಾರಿಯಾದರೂ ಆ ಕೊರತೆ ನೀಗಬಹುದು ಎಂಬ ವಿಶ್ವಾಸದಲ್ಲಿತ್ತು.

ಆದರೆ ಈಗ ಅಂಪಾಯರ್ ಕೆಟಲ್ ಬರೊ ಎನ್ನುತ್ತಿದ್ದಂತೇ ಭಾರತೀಯ ಫ್ಯಾನ್ಸ್ ಇನ್ನು ಟೀಂ ಇಂಡಿಯಾಕ್ಕೆ ಸೋಲೇ ಗತಿ ಎಂದಿದ್ದಾರೆ. ಕೆಟಲ್ ಬರೊ ಟೀಂ ಇಂಡಿಯಾಕ್ಕೆ ಅಂಪಾಯರಿಂಗ್ ಮಾಡಿದಾಗಲೆಲ್ಲಾ ಸೋಲು ಕಂಡಿದೆ. ಇದಕ್ಕೆ ಮೊದಲು ಏಕದಿನ ವಿಶ್ವಕಪ್ ಫೈನಲ್ ನಲ್ಲಿ ಭಾರತ ಸೋತಿದ್ದು ಇದಕ್ಕೆ ತಾಜಾ ಉದಾಹರಣೆ. ಅಭಿಮಾನಿಗಳ ಈ ನಂಬಿಕೆ ಹಲವು ಬಾರಿ ನಿಜವಾಗಿದೆ. ಈಗ ಮತ್ತೆ ಅದೇ ಆಗದಿದ್ದರೆ ಸಾಕು ಎಂದು ಅಭಿಮಾನಿಗಳು ಪ್ರಾರ್ಥಿಸುವಂತಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ