ಮೊಹಮ್ಮದ್ ಶಮಿಯನ್ನು ಕೈ ಬಿಟ್ಟಿದ್ದೇಕೆ? ಟೀಂ ಇಂಡಿಯಾ ಬೌಲಿಂಗ್ ಕೋಚ್ ಸ್ಪಷ್ಟನೆ

ಗುರುವಾರ, 14 ಸೆಪ್ಟಂಬರ್ 2023 (16:37 IST)
ಕೊಲೊಂಬೊ: ಏಷ್ಯಾ ಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಅನುಭವಿ ವೇಗಿ ಮೊಹಮ್ಮದ್ ಶಮಿಗೆ ಆಡುವ ಬಳಗದಲ್ಲಿ ಅವಕಾಶ ಸಿಕ್ಕಿದ್ದು ಕೇವಲ ಒಂದು ಪಂದ್ಯದಲ್ಲಿ ಮಾತ್ರ.

ಶಮಿಯನ್ನು ಕಡೆಗಣಿಸಿ ಶಾರ್ದೂಲ್ ಠಾಕೂರ್ ಗೆ ಮಣೆ ಹಾಕಲಾಗಿತ್ತು. ನೇಪಾಳ ವಿರುದ್ಧದ ಪಂದ್ಯದಲ್ಲಿ ಮಾತ್ರ ಶಮಿ ಆಡಿದ್ದರು. ಆ ಪಂದ್ಯದಲ್ಲಿ ಅವರು ರನ್ ನಿಯಂತ್ರಿಸಿದ್ದರೂ ಒಂದೇ ವಿಕೆಟ್ ಕಬಳಿಸಿದ್ದರು.

ಹಾಗಿದ್ದರೂ ಅನುಭವಿ ವೇಗಿಯನ್ನು ಆಡುವ ಬಳಗದಿಂದ ಹೊರಗಿಟ್ಟ ಬಗ್ಗೆ ಟೀಂ ಇಂಡಿಯಾ ಬೌಲಿಂಗ್ ಕೋಚ್ ಪರಸ್ ಮಾಂಬ್ರೆ ಸ್ಪಷ್ಟನೆ ನೀಡಿದ್ದಾರೆ. ‘ಶಮಿಯಂತಹ ಅನುಭವಿ ವೇಗಿಯನ್ನು ಹೊರಗಿಡುವ ನಿರ್ಧಾರ ಸುಲಭದ್ದಲ್ಲ. ಈ ಬಗ್ಗೆ ಅವರ ಜೊತೆಗೆ ಸ್ಪಷ್ಟವಾಗಿ ಮಾತನಾಡಲಾಗಿತ್ತು. ಯಾವುದೇ ಆಟಗಾರನನ್ನೂ ಆಡುವ ಬಳಗದಿಂದ ಹೊರಗಿಟ್ಟರೆ ನಾವು ಸ್ಪಷ್ಟನೆ ನೀಡಿಯೇ ನೀಡುತ್ತೇವೆ. ಎಲ್ಲಾ ಆಟಗಾರರಿಗೂ ಗೊತ್ತು ನಾವು ಏನೇ ನಿರ್ಧಾರ ತೆಗೆದುಕೊಂಡರೂ ಅದು ತಂಡದ ಹಿತದೃಷ್ಟಿಯಿಂದ ಎಂದು. ಶಮಿ ವಿಚಾರದಲ್ಲಿಯೂ ಅದನ್ನೇ ಮಾಡಿದ್ದೇವೆ’ ಎಂದಿದ್ದಾರೆ. ನಾಳೆಯ ಬಾಂಗ್ಲಾ ವಿರುದ್ದದ ಪಂದ್ಯದಲ್ಲಿ ಅವರು ಆಡುವ ನಿರೀಕ್ಷೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ