ದುಬೈ: ಟೀಂ ಇಂಡಿಯಾ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯ ಗೆಲುವಿನ ಬಳಿಕ ರೋಹಿತ್ ಶರ್ಮಾ ನಿವೃತ್ತಿ ಮತ್ತು ವಿರಾಟ್ ಕೊಹ್ಲಿ ನಿವೃತ್ತಿ ವದಂತಿಗಳಿಗೆ ತೆರೆ ಎಳೆದಿದ್ದಾರೆ. ದೇಶಕ್ಕಾಗಿ ಇನ್ನೊಂದು ವಿಶ್ವಕಪ್ ಗೆಲ್ಲದೇ ಈ ಜೋಡಿ ನಿವೃತ್ತಿಯಾಗಲ್ಲ ಎನ್ನುವುದು ಈಗ ಅಭಿಮಾನಿಗಳಿಗೆ ಖಾತ್ರಿಯಾಗಿದೆ.
ರೋಹಿತ್ ಶರ್ಮಾ ಚಾಂಪಿಯನ್ಸ್ ಟ್ರೋಫಿ ಫೈನಲ್ ಬಳಿಕ ನಿವೃತ್ತಿಯಾಗಲಿದ್ದಾರೆ ಎಂದು ಸುದ್ದಿ ಹಬ್ಬಿತ್ತು. ಆದರೆ ಫೈನಲ್ ಗೆಲುವಿನ ಬಳಿಕ ಪತ್ರಿಕಾಗೋಷ್ಠಿಯಲ್ಲಿ ರೋಹಿತ್ ಎಲ್ಲಾ ಅನುಮಾನಗಳಿಗೆ ತೆರೆ ಎಳೆದಿದ್ದಾರೆ. ಯಾರೂ ಸುಳ್ಳು ಸುದ್ದಿ ಹಬ್ಬಿಸುವುದು ಬೇಡ ಎಂದು ನಾನೇ ಸ್ಪಷ್ಟನೆ ನೀಡುತ್ತಿದ್ದಾನೆ. ನಾನು ಸದ್ಯಕ್ಕೆ ಈ ಫಾರ್ಮ್ಯಾಟ್ ನಿಂದ ನಿವೃತ್ತಿಯಾಗಲ್ಲ ಎಂದಿದ್ದರು.
ಫೈನಲ್ ಗೆಲುವಿನ ಸಂಭ್ರಮಾಚರಣೆ ಮಾಡುತ್ತಿದ್ದಾಗ ರೋಹಿತ್-ಕೊಹ್ಲಿ ಜೋಡಿ ಕ್ಯಾಮರಾ ಮುಂದೆ ಸ್ಟಂಪ್ಸ್ ಹಿಡಿದು ಕುಣಿದಾಡಿದ್ದರು. ಈ ವೇಳೆ ರೋಹಿತ್, ಇವರೆಲ್ಲಾ ನಾವು ನಿವೃತ್ತಿ ಘೋಷಿಸಲಿದ್ದೇವೆ ಎಂದುಕೊಂಡಿದ್ದಾರೆ ಎಂದು ತಮಾಷೆ ಮಾಡಿದ್ದಾರೆ.
ತಮ್ಮ ನಿವೃತ್ತಿಗೆ ಮುನ್ನ ರೋಹಿತ್ ಗೆ ಇನ್ನೊಂದು ಕನಸಿದೆ. 2023 ರಲ್ಲಿ ಏಕದಿನ ವಿಶ್ವಕಪ್ ಗೆಲ್ಲುವ ಕನಸು ಕನಸಾಗಿಯೇ ಉಳಿಯಿತು. ದೇಶಕ್ಕಾಗಿ ಇನ್ನೊಮ್ಮೆ ವಿಶ್ವಕಪ್ ಗೆಲ್ಲುವ ಕನಸು ಅವರು ಕಂಡಿದ್ದರು. ಅದು ಟಿ20 ವಿಶ್ವಕಪ್ ನಲ್ಲಿ ನೆರವೇರಿದೆ. ಹಾಗಿದ್ದರೂ ಏಕದಿನ ವಿಶ್ವಕಪ್ ಗೆಲ್ಲುವ ಕನಸು ನನಸಾಗಿಲ್ಲ. ಹೀಗಾಗಿ ಇದನ್ನು ನನಸು ಮಾಡಿಯೇ ಈ ಜೋಡಿ ವಿರಮಿಸುವ ಸಾಧ್ಯತೆಯಿದೆ. ಅಲ್ಲಿಯವರೆಗೆ ಈ ರೋ-ಕೋ ಜೋಡಿಯನ್ನು ಯಾರೂ ತಡೆಯಲು ಸಾಧ್ಯವಿಲ್ಲ.