ಮುಂಬೈ: ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗರು ಈ ಬಾರಿ ರಣಜಿ ಆಡಿ ಎಲ್ಲರ ಗಮನಸೆಳೆದಿದ್ದರು. ಆದರೆ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಸೇರಿದಂತೆ ಟೀಂ ಇಂಡಿಯಾ ಸ್ಟಾರ್ ಗಳು ಕಾಟಾಚಾರಕ್ಕೆ ರಣಜಿ ಆಡಿದ್ರಾ ಎನ್ನುವ ಅನುಮಾನ ಕಾಡಿದೆ.
ಟೀಂ ಇಂಡಿಯಾದಲ್ಲಿ ಫಾರ್ಮ್ ಕೊರತೆಯಿಂದ ತೀವ್ರ ಟೀಕೆಗೊಳಗಾಗಿದ್ದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಈ ಬಾರಿ ರಣಜಿ ಆಡಿದ್ದರು. ಇದಕ್ಕೆ ಬಿಸಿಸಿಐ ಮತ್ತು ಕೋಚ್ ಗೌತಮ್ ಗಂಭೀರ್ ಖಡಕ್ ನಿಯಮ ಕಾರಣ. ಟೀಂ ಇಂಡಿಯಾಕ್ಕೆ ಕಮ್ ಬ್ಯಾಕ್ ಮಾಡಲು ಹಿರಿಯ ಆಟಗಾರರೂ ದೇಶೀಯ ಕ್ರಿಕೆಟ್ ಆಡಲೇಬೇಕು ಎಂದು ಷರತ್ತು ಹಾಕಲಾಗಿತ್ತು.
ಈ ಕಾರಣಕ್ಕೆ ರೋಹಿತ್ ಶರ್ಮಾ ಮುಂಬೈ ಪರ, ಕೊಹ್ಲಿ ದೆಹಲಿ ಪರ ರಣಜಿ ಟ್ರೋಫಿ ಆಡಿದ್ದರು. ಆದರೆ ಇಬ್ಬರೂ ಇದನ್ನು ಗಂಭೀರವಾಗಿ ಪರಿಗಣಿಸಿದಂತೆಯೇ ಇಲ್ಲ. ಯಾವುದೋ ಪ್ರದರ್ಶನ ಪಂದ್ಯಕ್ಕೆ ಬಂದವರಂತೆ ಕಾಟಾಚಾರಕ್ಕೆ ಆಡಿ ಹೋದರು ಎನ್ನಬಹುದು.
ರೋಹಿತ್ ಶರ್ಮಾ ಮತ್ತು ಕೊಹ್ಲಿ ಇಬ್ಬರೂ ರಣಜಿ ಟ್ರೋಫಿಯಲ್ಲೂ ವಿಫಲರಾಗಿದ್ದರು. ರೋಹಿತ್ ಎರಡು ಇನಿಂಗ್ಸ್ ನಲ್ಲೂ ಬ್ಯಾಟಿಂಗ್ ಮಾಡಿದ್ದರೆ ಕೊಹ್ಲಿಗೆ ಒಂದೇ ಇನಿಂಗ್ಸ್ ನಲ್ಲಿ ಬ್ಯಾಟಿಂಗ್ ಗೆ ಅವಕಾಶ ಸಿಕ್ಕಿತ್ತು. ವಿಶೇಷವಾಗಿ ಕೊಹ್ಲಿ ಆಟದ ಕಡೆ ಗಮನಹರಿಸುವುದಕ್ಕಿಂತ ಅಭಿಮಾನಿಗಳ ಕ್ರೇಜ್ ನಿಂದ ರಣಜಿ ಪಂದ್ಯಕ್ಕೆ ಸ್ವಲ್ಪ ಜನಪ್ರಿಯತೆ ಗಿಟ್ಟಿಸಿದ್ದಷ್ಟೇ ಬಂತು. ಇದರ ಹೊರತಾಗಿ ಈ ಸ್ಟಾರ್ ಗಳಿಗೆ ಈ ರಣಜಿ ಪಂದ್ಯ ಯಾವುದೇ ಪರಿಣಾಮ ಬೀರಿಲ್ಲ. ಇಂಥಾ ಚಂದಕ್ಕೆ ರಣಜಿ ಆಡುವ ತೋರಿಕೆ ಯಾಕೆ ಬೇಕಿತ್ತು ಎಂದು ಹಲವರು ಟೀಕೆ ಮಾಡುತ್ತಿದ್ದಾರೆ.