ದುಬೈ: ಐಸಿಸಿ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಇಂದು ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಉಭಯ ತಂಡಗಳು ಈಗಾಗಲೇ ಸೆಮಿಫೈನಲ್ ಪ್ರವೇಶಿಸಿದ್ದು, ಈ ಪಂದ್ಯ ಎ ಗುಂಪಿನ ಅಗ್ರಸ್ಥಾನಕ್ಕಾಗಿ ನಿರ್ಣಾಯಕವಾಗಲಿದೆ.
ದುಬೈನ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುವ ಈ ಪಂದ್ಯವು ಚಾಂಪಿಯನ್ಸ್ ಟ್ರೋಫಿಯ ಗುಂಪು ಹಂತದ ಕೊನೆಯ ಹಣಾಹಣಿಯಾಗಿವೆ. ಎ ಗುಂಪಿನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ಸೆಮಿಫೈನಲ್ ಪ್ರವೇಶಿಸಿದ್ದರೆ, ಬಿ ತಂಡದಲ್ಲಿ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ನಾಲ್ಕರ ಘಟ್ಟ ಪ್ರವೇಶಿಸಿವೆ.
ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಗುಂಪು ಹಂತದಲ್ಲಿ ಬಾಂಗ್ಲಾದೇಶ ಮತ್ತು ಪಾಕಿಸ್ತಾನ ತಂಡಗಳ ವಿರುದ್ಧ ಸವಾರಿ ಮಾಡಿವೆ. ಮೂರನೇ ಪಂದ್ಯಗಳು ಎರಡೂ ತಂಡಗಳಿಗೆ ನಿರ್ಣಾಯಕವಾಗಲಿದೆ. ಉಭಯ ತಂಡಗಳು ಅಜೇಯವಾಗಿ ಸೆಮಿಫೈನಲ್‌ಗೆ ಮುನ್ನಡೆಯುವ ಕನಸು ಕಾಣುತ್ತಿವೆ.
ಸದ್ಯ ತಲಾ 4 ಅಂಕ ಗಳಿಸಿದ್ದರೂ ನೆಟ್ ರನ್‌ರೇಟ್ ಆಧಾರದಲ್ಲಿ ನ್ಯೂಜಿಲೆಂಡ್ ತಂಡವು ಎ ಗುಂಪಿನ ಅಗ್ರಸ್ಥಾನದಲ್ಲಿದ್ದರೆ, ಭಾರತ ಎರಡನೇಸ್ಥಾನದಲ್ಲಿದೆ. ಈ ಪಂದ್ಯದಲ್ಲಿ ಭಾರತ ಗೆದ್ದರೇ ತನ್ನ ಗುಂಪಿನಿಂದ ಅಗ್ರಸ್ಥಾನಿಯಾಗಿ ಹೊಮ್ಮಲಿದೆ.
ಉಭಯ ತಂಡಗಳು ಈವರೆಗೆ 118 ಏಕದಿನ ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ಪೈಕಿ 60 ಪಂದ್ಯಗಳಲ್ಲಿ ಭಾರತ, 50 ಪಂದ್ಯಗಳಲ್ಲಿ ನ್ಯೂಜಿಲೆಂಡ್ ಗೆಲುವು ಸಾಧಿಸಿದೆ. 7 ಪಂದ್ಯಗಳು ಫಲಿತಾಂಶವಿಲ್ಲದೇ ರದ್ದಾದರೆ, ಒಂದು ಪಂದ್ಯ ಸಮಬಲಗೊಂಡಿದೆ.