ಅಡಿಲೇಡ್: ಆಸ್ಟ್ರೇಲಿಯಾ ವಿರುದ್ಧ ಎರಡನೇ ಟೆಸ್ಟ್ ಪಂದ್ಯದಲ್ಲಿ ಹೀನಾಯ ಸೋಲು ಕಂಡ ಬಳಿಕ ಟೀಂ ಇಂಡಿಯಾ ಈಗ ಮೂರನೇ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಈಗ ತಂಡಕ್ಕೆ ಸ್ಟಾರ್ ವೇಗಿಯನ್ನು ಮರಳಿ ಕರೆತರುತ್ತಾ ಎನ್ನುವ ಪ್ರಶ್ನೆ ಎದುರಾಗಿದೆ.
ನ್ಯೂಜಿಲೆಂಡ್ ವಿರುದ್ಧ ಮೂರೂ ಟೆಸ್ಟ್ ಸೋತಿದ್ದ ಟೀಂ ಇಂಡಿಯಾಗೆ ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್ ಗೆಲುವು ಆತ್ಮವಿಶ್ವಾಸ ಚಿಗುರಿಸಿತ್ತು. ಆದರೆ ಇದೀಗ ಮತ್ತೆ ಬ್ಯಾಟರ್ ಗಳ ವೈಫಲ್ಯದಿಂದಾಗಿ ಟೀಂ ಇಂಡಿಯಾ ಎರಡನೇ ಟೆಸ್ಟ್ ಪಂದ್ಯವನ್ನು ಸೋತು ಹತಾಶೆಗೊಳಗಾಗಿದೆ.
ಇದರ ನಡುವೆ ಸ್ಟಾರ್ ವೇಗಿ ಮೊಹಮ್ಮದ್ ಶಮಿಯನ್ನು ತಂಡಕ್ಕೆ ಕರೆಸಿಕೊಳ್ಳಬೇಕು ಎಂದು ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ. ಶಮಿ ಈಗಾಗಲೇ ರಣಜಿ ಪಂದ್ಯದಲ್ಲಿ ಆಡಿ ಫಿಟ್ನೆಸ್ ಸಾಬೀತುಪಡಿಸಿದ್ದಾರೆ. ಹಾಗಿದ್ದರೂ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಮರಳಲು ಅವರಿಗೆ ಇನ್ನೂ ಎನ್ ಸಿಎಯಿಂದ ಸರ್ಟಿಫಿಕೇಟ್ ಸಿಕ್ಕಿಲ್ಲ.
ಹೀಗಾಗಿ ಇಂದು ರೋಹಿತ್ ಶರ್ಮಾಗೂ ಶಮಿ ಮರಳಿ ಯಾವಾಗ ಬರ್ತಾರೆ ಎಂಬ ಪ್ರಶ್ನೆ ಎದುರಾಗಿದೆ. ಇದಕ್ಕೆ ಉತ್ತರಿಸಿದ ಅವರು ಶಮಿ ಸಂಪೂರ್ಣ ಫಿಟ್ ಆಗಿದ್ದಾರೆ ಎಂದು ಖಚಿತವಾದ ಬಳಿಕವಷ್ಟೇ ಅವರನ್ನು ತಂಡಕ್ಕೆ ಕರೆಸಿಕೊಳ್ಳಲಿದ್ದೇವೆ. ನಾವೂ ಅವರ ಫಿಟ್ನೆಸ್ ವರದಿಗಾಗಿ ಎದಿರು ನೋಡುತ್ತಿದ್ದೇವೆ. ವೈದ್ಯರು ಅವರನ್ನು ನಿಗಾ ವಹಿಸುತ್ತಿದ್ದಾರೆ. ಅವರ ಸಲಹೆಯ ಮೇರೆ ಮುಂದಿನ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.