ಮಹಿಳಾ ವಿಶ್ವಕಪ್: ಮಿಥಾಲಿ ರಾಜ್ ಪಡೆಗೆ ಕಠಿಣ ಗುರಿ ನೀಡಿದ ನ್ಯೂಜಿಲೆಂಡ್
ಗುರುವಾರ, 10 ಮಾರ್ಚ್ 2022 (10:10 IST)
ಹ್ಯಾಮಿಲ್ಟನ್: ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಇಂದು ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಪಂದ್ಯ ನಡೆಯುತ್ತಿದ್ದು, ಮೊದಲು ಬ್ಯಾಟಿಂಗ್ ಮಾಡಿದ ಕಿವೀಸ್ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 260 ರನ್ ಗಳಿಸಿದೆ.
ನ್ಯೂಜಿಲೆಂಡ್ ಆರಂಭ ಅದ್ಭುತವಾಗಿತ್ತು. 300 ರನ್ ಗಳಿಸುವ ನಿರೀಕ್ಷೆಯಿತ್ತು. ಆದರೆ ಕೊನೆಯ 8 ಓವರ್ ಗಳಲ್ಲಿ ಉತ್ತಮ ದಾಳಿ ಸಂಘಟಿಸಿದ ಭಾರತದ ವನಿತೆಯರು ಕೇವಲ 38 ರನ್ ನೀಡಿ 5 ವಿಕೆಟ್ ಕಬಳಿಸಿದರು.
ನ್ಯೂಜಿಲೆಂಡ್ ಪರ ನಾಯಕಿ ಸೋಫಿ ಡೆವೈನ್ 35, ಅಮೆಲಿಯಾ ಕೆರ್ 50, ಆಮಿ ಸ್ಯಾಟರ್ವೈಟ್ 75 ರನ್, ಕ್ಯಾಟಿ ಮಾರ್ಟಿನ್ 41 ರನ್ ಗಳಿಸಿ ಮಿಂಚಿದರು. ಭಾರತದ ಪರ ಪೂಜಾ ವಸ್ತ್ರಾಕರ್ 4, ರಾಜೇಶ್ವರಿ ಗಾಯಕ್ ವಾಡ್ 2, ಜೂಲಾನ್ ಗೋಸ್ವಾಮಿ ಮತ್ತು ದೀಪ್ತಿ ಶರ್ಮಾ ತಲಾ 1 ವಿಕೆಟ್ ತಮ್ಮದಾಗಿಸಿಕೊಂಡರು.