ಏಕದಿನ ವಿಶ್ವಕಪ್: ಆಫ್ರಿಕಾಗೆ ಮತ್ತೆ ನಿರಾಸೆ, ಫೈನಲ್ ಗೇರಿದ ಆಸ್ಟ್ರೇಲಿಯಾ

ಗುರುವಾರ, 16 ನವೆಂಬರ್ 2023 (22:06 IST)
ಕೋಲ್ಕೊತ್ತಾ: ಏಕದಿನ ವಿಶ್ವಕಪ್ ಕ್ರಿಕೆಟ್ ನಲ್ಲಿ ದ.ಆಫ್ರಿಕಾ ಮತ್ತೆ ಚೋಕರ್ಸ್ ಹಣೆಪಟ್ಟಿ ಕಟ್ಟಿಕೊಂಡಿದೆ. ಆಸ್ಟ್ರೇಲಿಯಾ ವಿರುದ್ಧ ಸೆಮಿಫೈನಲ್ ಪಂದ್ಯದಲ್ಲಿ 3 ವಿಕೆಟ್ ಗಳ ಸೋಲು ಅನುಭವಿಸಿದೆ.

ಇದೀಗ ಆಸ್ಟ್ರೇಲಿಯಾ ಫೈನಲ್ ಪಂದ್ಯದಲ್ಲಿ ಬಲಿಷ್ಠ ಟೀಂ ಇಂಡಿಯಾ ವಿರುದ್ಧ ಆಡಲಿದೆ. ಮೊದಲು ಬ್ಯಾಟಿಂಗ್ ಮಾಡಿದ ಆಫ್ರಿಕಾ ಬ್ಯಾಟಿಂಗ್ ಕುಸಿತದಿಂದಾಗಿ 49.4 ಓವರ್ ಗಳಲ್ಲಿ 212 ರನ್ ಗಳಿಗೆ ಆಲೌಟ್ ಆಯಿತು. ಒಂದು ಹಂತದಲ್ಲಿ 24 ರನ್ ಗಳಿಗೆ 4 ವಿಕೆಟ್ ಕಳೆದುಕೊಂಡಿದ್ದ ಆಫ್ರಿಕಾಗೆ ಆಸರೆಯಾಗಿದ್ದ ಡೇವಿಡ್ ಮಿಲ್ಲರ್.

ಒಟ್ಟು 116 ಎಸೆತ ಎದುರಿಸಿದ ಮಿಲ್ಲರ್ 101 ರನ್ ಗಳಿಸಿ ತಂಡಕ್ಕೆ ಗೌರವಯುತ ಮೊತ್ತ ಕೊಡಿಸಲು ನೆರವಾದರು. ಅವರಿಗೆ ತಕ್ಕ ಸಾಥ್ ನೀಡಿದ ಕ್ಲಾಸನ್ 47 ರನ್ ಗಳ ಕೊಡುಗೆ ನೀಡಿದರು. ಆಸ್ಟ್ರೇಲಿಯಾ ಪರ ಸ್ಟಾರ್ಕ್, ಕ್ಯುಮಿನ್ಸ್ ತಲಾ 3, ಹೇಝಲ್ ವುಡ್ 2 ವಿಕೆಟ್ ಕಬಳಿಸಿದರು.

ಈ ಮೊತ್ತ ಬೆನ್ನತ್ತಿದ ಆಸ್ಟ್ರೇಲಿಯಾ ಉತ್ತಮ ಆರಂಭ ಪಡೆಯಿತು. ಟ್ರಾವಿಸ್ ಹೆಡ್ 62, ಡೇವಿಡ್ ವಾರ್ನರ್ 29 ರನ್ ಗಳಿಸಿ ಔಟಾದರು. ಸ್ಟೀವ್ ಸ್ಮಿತ್ 30 ರನ್ ಗಳ ಕೊಡುಗೆ ನೀಡಿದರು. ಒಂದು ಹಂತದಲ್ಲಿ 137 ರನ್ ಗಳಿಗೆ ಗ್ಲೆನ್ ಮ್ಯಾಕ್ಸ್ ವೆಲ್ ರೂಪದಲ್ಲಿ ಆಸೀಸ್ 5 ನೇ ವಿಕೆಟ್ ಕಳೆದುಕೊಂಡಾಗ ಆಫ್ರಿಕಾಗೆ ಗೆಲುವಿನ ಆಸೆ ಚಿಗುರಿತ್ತು. ಆದರೆ ಜೋಶ್ ಇಂಗ್ಲಿಸ್ ಅದಕ್ಕೆ ಅವಕಾಶ ಕೊಡಲಿಲ್ಲ. ಅವರು 28 ರನ್ ಗಳಿಸಿ ಅಪಾಯ ತಪ್ಪಿಸಿದರು. ಆದರೆ ಕೊನೆಯವರೆಗೂ ಹೋರಾಡಿದ ಆಫ್ರಿಕನ್ನರನ್ನು ಮೆಚ್ಚಲೇಬೇಕು. ಅಂತಿಮವಾಗಿ ಆಸ್ಟ್ರೇಲಿಯಾ 47.2 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 215 ರನ್ ಗಳಿಸುವ ಮೂಲಕ ಫೈನಲ್ ಗೆ ಅರ್ಹತೆ ಪಡೆಯಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ