ಬೆಂಗಳೂರು: ಡಬ್ಲ್ಲುಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ 25 ರನ್ ಗಳಿಂದ ಸೋತ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಆವೃತ್ತಿಯಲ್ಲಿ ಮೊದಲ ಸೋಲು ಕಂಡಿದೆ.
ಗೆಲ್ಲಲ್ಲು 195 ರನ್ ಗಳ ಬೃಹತ್ ಮೊತ್ತ ಬೆನ್ನತ್ತಿದ ಆರ್ ಸಿಬಿ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 169 ರನ್ ಗಳಿಸಲಷ್ಟೇ ಶಕ್ತವಾಯಿತು. ನಾಯಕಿ ಸ್ಮೃತಿ ಮಂಧಾನ ತಂಡಕ್ಕೆ ಬಿರುಸಿನ ಆರಂಭ ನೀಡಿದರು. 43 ಎಸೆತ ಎದುರಿಸಿದ ಅವರು 3 ಸಿಕ್ಸರ್ ಸಹಿತ 74 ರನ್ ಗಳಿಸಿದ್ದಾಗ ಔಟಾಗಿ ನಿರಾಶೆ ಮೂಡಿಸಿದರು. ಅವರು ಔಟಾಗುವುದರೊಂದಿಗೆ ತಂಡದ ಜಯದ ಆಸೆಯೂ ಕ್ಷೀಣಿಸುತ್ತಾ ಹೋಯಿತು.
ಇದೇ ಮೊದಲ ಬಾರಿಗೆ ಸ್ಮೃತಿ ಡಬ್ಲ್ಲುಪಿಎಲ್ ಟೂರ್ನಿಯಲ್ಲಿ ಅರ್ಧಶತಕ ಸಿಡಿಸಿದರು. ಇಷ್ಟು ದಿನ ಕ್ವೀನ್ ಆಟ ನೋಡಲು ಬರುತ್ತಿದ್ದ ಪ್ರೇಕ್ಷಕರಿಗೆ ಸ್ಮೃತಿ ತಮ್ಮ ನೈಜ ದರ್ಶನ ನೀಡಿದರು. ಅದ್ಭುತ ಹೊಡೆತಗಳ ಮೂಲಕ ತಮ್ಮ ಖ್ಯಾತಿಗೆ ತಕ್ಕ ಆಟವಾಡಿದರು. ಆದರೆ ತಂಡವನ್ನು ಕೊನೆಯವರೆಗೂ ನಡೆಸಲು ಅವರಿಗೆ ಸಾಧ‍್ಯವಾಗಲಿಲ್ಲ. ಫಾರ್ಮ್ ನಲ್ಲಿದ್ದ ರಿಚಾ ಘೋಷ್ ಕೂಡಾ 19 ರನ್ ಗಳಿಸಿ ಔಟಾದ ಮೇಲೆ ಆರ್ ಸಿಬಿ ಸೋಲು ನಿಶ್ಚಿತವಾಗಿತ್ತು. ಡೆಲ್ಲಿ ಪರ ಮತ್ತೆ ಮಿಂಚಿದ ಮರಿಝೈನ್ ಕಪ್ 2 ಪ್ರಮುಖ ವಿಕೆಟ್ ಕಿತ್ತು ಗೆಲುವಿನ ಸೂಚನೆ ಕೊಟ್ಟರು. ಬ್ಯಾಟಿಂಗ್ ನಲ್ಲಿ ಮಿಂಚಿದ್ದ ಜೆಸ್ ಜೊನಾಸೆನ್ ಬೌಲಿಂಗ್ ನಲ್ಲೂ 3 ವಿಕೆಟ್ ಕಿತ್ತರು.
ಈ ಸೋಲಿನ ಬಳಿಕ ಮಾತನಾಡಿದ ಆರ್ ಸಿಬಿ ನಾಯಕಿ ಸ್ಮೃತಿ ಮಂಧಾನ ಸೋಲಿಗೆ ಬೌಲರ್ ಗಳನ್ನು ದೂಷಿಸಿದ್ದಾರೆ. ಮೊದಲ ಎರಡು ಪಂದ್ಯಗಳಲ್ಲಿ ತೋರಿದ ಬೌಲಿಂಗ್ ನಿರ್ವಹಣೆ ಈ ಪಂದ್ಯದಲ್ಲಿ ಬರಲಿಲ್ಲ. ಅದೇ ಕಾರಣಕ್ಕೆ ನಾವು ಸೋಲುವಂತಾಯಿತು ಎಂದಿದ್ದಾರೆ. ನಾವು ಅಂದುಕೊಂಡ ರೀತಿ ಬೌಲಿಂಗ್, ಫೀಲ್ಡಿಂಗ್ ಮಾಡಲಿಲ್ಲ. ಆದರೆ ಮತ್ತೆ ಕಮ್ ಬ್ಯಾಕ್ ಮಾಡುತ್ತೇವೆ ಎಂದಿದ್ದಾರೆ.