ನವದೆಹಲಿ: ಇಷ್ಟು ದಿನ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಂಗೇರಿಸಿದ್ದ ಮಹಿಳೆಯರ ಪ್ರೀಮಿಯರ್ ಲೀಗ್ ಕ್ರಿಕೆಟ್ ಈಗ ರಾಷ್ಟ್ರ ರಾಜಧಾನಿ ದೆಹಲಿಗೆ ಕಾಲಿಟ್ಟಿದೆ.
ಇಂದು ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಜೈಂಟ್ಸ್ ನಡುವೆ ಪಂದ್ಯ ನಡೆಯಲಿದೆ. ಚಿನ್ನಸ್ವಾಮಿ ಮೈದಾನದಲ್ಲಿ ನಡೆದಿದ್ದ ಕೊನೆಯ ಪಂದ್ಯದಲ್ಲಿ ಭರ್ಜರಿ ಗೆಲುವು ಕಂಡ ಆತ್ಮವಿಶ್ವಾಸದಲ್ಲಿರುವ ಸ್ಮೃತಿ ಮಂಧಾನ ಪಡೆ ಈಗ ದೆಹಲಿಯಲ್ಲಿ ಅದೇ ಪ್ರದರ್ಶನ ಕಾಯ್ದುಕೊಳ್ಳುವ ವಿಶ್ವಾಸದಲ್ಲಿದೆ.
ಇದುವರೆಗೆ ಟೂರ್ನಿಯಲ್ಲಿ 5 ಪಂದ್ಯಗಳನ್ನಾಡಿರುವ ಆರ್ ಸಿಬಿ ಮೂರು ಗೆಲುವು ಕಂಡಿದ್ದು, ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಮೊದಲ ಎರಡು ಪಂದ್ಯಗಳಲ್ಲಿ ಸರ್ವಾಂಗೀಣ ಪ್ರದರ್ಶನ ನೀಡಿದ್ದ ಆರ್ ಸಿಬಿ ಮುಂದಿನ ಎರಡು ಪಂದ್ಯಗಳಲ್ಲಿ ಪ್ರಬಲ ಡೆಲ್ಲಿ, ಮುಂಬೈ ವಿರುದ್ಧ ಸೋತಿತ್ತು. ಆದರೆ ಕಳೆದ ಪಂದ್ಯದಲ್ಲಿ ಯುಪಿ ವಿರುದ್ಧ ಗೆಲುವು ಸಾಧಿಸಿದ್ದು, ಆರ್ ಸಿಬಿ ಆತ್ಮವಿಶ್ವಾಸ ಹೆಚ್ಚಿಸಿದೆ. ನಾಯಕಿ ಸ್ಮೃತಿ ಮಂಧಾನ, ಎಲ್ಲಿಸ್ ಪೆರ್ರಿ ಫಾರ್ಮ್ ನಲ್ಲಿರುವುದು ತಂಡಕ್ಕೆ ಪ್ಲಸ್ ಪಾಯಿಂಟ್ ಆಗಿದೆ. ಬೌಲಿಂಗ್ ನಲ್ಲಿ ಸೋಫಿ ಡಿವೈನ್ ಉತ್ತಮ ಪ್ರದರ್ಶನ ನೀಡಿದ್ದಾರೆ. ಡೆಲ್ಲಿ ಮೈದಾನ ಸ್ಪಿನ್ನರ್ ಗಳಿಗೂ ನೆರವು ನೀಡುವ ವಿಶ್ವಾಸವಿದ್ದು, ಶ್ರೇಯಾಂಕ ಪಾಟೀಲ್ ಮಿಂಚಬಹುದು.
ಅತ್ತ ಗುಜರಾತ್ ಇದುವರೆಗೆ ಆಡಿದ ಎಲ್ಲಾ ಪಂದ್ಯಗಳನ್ನೂ ಸೋತು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಕಳೆದ ಬಾರಿ ಆರ್ ಸಿಬಿ ಮುಖಾಮುಖಿಯಾಗಿದ್ದಲೂ ಗುಜರಾತ್ ಸೋಲು ಅನುಭವಿಸಿತ್ತು. ಆದರೆ ಇದೀಗ ವಿಭಿನ್ನ ಪಿಚ್ ನಲ್ಲಿ ತಿರುಗಿಬೀಳುವ ವಿಶ್ವಾಸದಲ್ಲಿದೆ. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.