ಬೆಂಗಳೂರು: ಡಬ್ಲ್ಯುಪಿಎಲ್ 2024 ರಲ್ಲಿ ಇಂದು ಪ್ರಬಲ ತಂಡಗಳಾದ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಮಹತ್ವದ ಪಂದ್ಯ ನಡೆಯಲಿದೆ. ಮುಂಬೈ ಹಾಲಿ ಚಾಂಪಿಯನ್ ಆಗಿದ್ದರೆ, ಡೆಲ್ಲಿ ರನ್ನರ್ ಅಪ್ ಆಗಿತ್ತು.
ಮುಂಬೈ ಇಂಡಿಯನ್ಸ್ ಇದುವರೆಗೆ ಆಡಿದ 4 ಪಂದ್ಯಗಳ ಪೈಕಿ ಮೂರು ಗೆದ್ದು ಒಂದು ಸೋಲು ಅನುಭವಿಸಿದೆ. ರನ್ ಸರಾಸರಿ ಆಧಾರದಲ್ಲಿ ಅಂಕಪಟ್ಟಿಯಲ್ಲಿ ಡೆಲ್ಲಿಗಿಂತ ಒಂದು ಸ್ಥಾನ ಕೆಳಗೆ ಅಂದರೆ ನಂ.1 ಸ್ಥಾನದಲ್ಲಿದೆ. ಅತ್ತ ಡೆಲ್ಲಿ ಕ್ಯಾಪಿಟಲ್ಸ್ ಕೂಡಾ ಇಷ್ಟೇ ಪಂದ್ಯಗಳನ್ನು ಗೆದ್ದಿದ್ದರೂ ರನ್ ಸರಾಸರಿ ಆಧಾರದಲ್ಲಿ ನಂ.1 ಸ್ಥಾನದಲ್ಲಿದೆ.
ಮುಂಬೈ ಇಂಡಿಯನ್ಸ್ ಕಳೆದ ಅವೃತ್ತಿಯಂತೇ ಈ ಆವೃತ್ತಿಯಲ್ಲೂ ಅತ್ಯುತ್ತಮ ಪ್ರದರ್ಶನ ನೀಡುತ್ತಾ ಬಂದಿದೆ. ಆದರೆ ಕಳೆದ ಎರಡು ಪಂದ್ಯಗಳಲ್ಲಿ ಖಾಯಂ ನಾಯಕಿ ಹರ್ಮನ್ ಪ್ರೀತ್ ಕೌರ್ ಗಾಯದಿಂದಾಗಿ ಕಣಕ್ಕಿಳಿದಿಲ್ಲ. ಹಾಗಿದ್ದರೂ ಅವರ ಸ್ಥಾನದಲ್ಲಿ ಸ್ಕೀವರ್ ಬ್ರಂಟ್ ಅತ್ಯುತ್ತಮವಾಗಿ ತಂಡ ಮುನ್ನಡೆಸಿದ್ದಾರೆ. ತಂಡದಲ್ಲಿ ಅಮೆಲಿಯಾ ಕೆರ್ ಅತ್ಯುತ್ತಮ ಫಾರ್ಮ್ ನಲ್ಲಿದ್ದಾರೆ. ಹೀಲೇ ಮ್ಯಾಥ್ಸೂಸ್, ಪೂಜಾ ವಸ್ತ್ರಾಕರ್ ಸೇರಿದಂತೆ ಮುಂಬೈ ಸ್ಟ್ರಾಂಗ್ ಆಗಿದೆ.
ಇತ್ತ ಡೆಲ್ಲಿ ಕೂಡಾ ಕಡಿಮೆಯೇನಲ್ಲ. ಭಾರತೀಯ ತಾರೆ ಜೆಮಿಮಾ ರೊಡ್ರಿಗಸ್, ಶಫಾಲಿ ವರ್ಮ ಜೊತೆಗೆ ನಾಯಕಿ ಮೆಗ್ ಲ್ಯಾನಿಂಗ್ ರನ್ನು ಹೊಂದಿದ ಡೆಲ್ಲಿ ಬ್ಯಾಟಿಂಗ್ ಬಲಾಢ್ಯವಾಗಿದೆ. ಜೊತೆಗೆ ಬೌಲಿಂಗ್ ಮರಿಝೈನ್ ಕಪ್ ಒಬ್ಬರೇ ಎದುರಾಳಿಗಳನ್ನು ಹಳಿ ತಪ್ಪಿಸಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಹೀಗಾಗಿ ಇದು ಬಲಾಢ್ಯರ ನಡುವಿನ ಕದನ ಎಂದೇ ಹೇಳಬಹುದು. ಇಂದಿನ ಈ ರಣರೋಚಕ ಪಂದ್ಯ ಸಂಜೆ 7.30ಕ್ಕೆ ಆರಂಭವಾಗಲಿದೆ.