ಮುಂಬೈ: ಏಷ್ಯಾ ಕಪ್ ಆಡಲಿರುವ ಟೀಂ ಇಂಡಿಯಾ ತಂಡದಲ್ಲಿ ಈ ಬಾರಿ ಖಲೀಲ್ ಅಹಮ್ಮದ್ ಎಂಬ ಹೊಸ ಪ್ರತಿಭೆಗೆ ಅವಕಾಶ ನೀಡಲಾಗಿದೆ.
ಭಾರತ ಎ ತಂಡದಲ್ಲಿ ರಾಹುಲ್ ದ್ರಾವಿಡ್ ತರಬೇತಿಯಲ್ಲಿ ಪಳಗಿದ ಖಲೀಲ್ ಇದೀಗ ಟೀಂ ಇಂಡಿಯಾದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಅಲ್ಲಿಗೆ ಮತ್ತೊಬ್ಬ ದ್ರಾವಿಡ್ ಶಿಷ್ಯ ಟೀಂ ಇಂಡಿಯಾ ಸೇರಿಕೊಂಡಂತಾಗಿದೆ.
ಟೀಂ ಇಂಡಿಯಾಕ್ಕೆ ಆಯ್ಕೆಯಾದ ಬೆನ್ನಲ್ಲೇ ತಮ್ಮ ಯಶಸ್ಸಿಗೆ ರಾಹುಲ್ ದ್ರಾವಿಡ್ ಕಾರಣ ಎಂದು ಖಲೀಲ್ ಹೆಮ್ಮೆಯಿಂದಲೇ ಹೇಳಿಕೊಂಡಿದ್ದಾರೆ. ‘ನಾನು ದ್ರಾವಿಡ್ ಸರ್ ಗೆ ಎಷ್ಟು ಧನ್ಯವಾದ ಸಲ್ಲಿಸಿದರೂ ಸಾಲದು. ಕಳೆಗುಂದಿದ್ದ ನನ್ನ ವೃತ್ತಿ ಜೀವನದಲ್ಲಿ ಆತ್ಮವಿಶ್ವಾಸ ತುಂಬಿ ಹೊಸ ವೃತ್ತಿ ಜೀವನ ಒದಗಿಸಿದವರು ಅವರು. ನಾನು ಅಂದು ಭಯದಿಂದಲೇ ತಪ್ಪುಗಳನ್ನು ಮಾಡುತ್ತಿದ್ದೆ. ಆದರೆ ದ್ರಾವಿಡ್ ಸರ್ ನನ್ನಲ್ಲಿ ಆತ್ಮವಿಶ್ವಾಸ ತುಂಬಿದರು’ ಎಂದು ಖಲೀಲ್ ಗುರು ದ್ರಾವಿಡ್ ಗೆ ಧನ್ಯವಾದ ಅರ್ಪಿಸಿದ್ದಾರೆ.
ವೇಗದ ಬೌಲರ್ ಆಗಿರುವ ಖಲೀಲ್ ಗೆ ಟೀಂ ಇಂಡಿಯಾದ ದಿಗ್ಗಜ ವೇಗಿ ಜಹೀರ್ ಖಾನ್ ರಂತೆ ಆಗುವ ಕನಸಿದೆಯಂತೆ. ಒಂದು ವೇಳೆ ಖಲೀಲ್ ಟೀಂ ಇಂಡಿಯಾದಲ್ಲಿ ಯಶಸ್ವಿಯಾದರೆ ಗುರು ದ್ರಾವಿಡ್ ಕಿರೀಟಕ್ಕೆ ಮತ್ತೊಂದು ಗರಿ ಸಿಕ್ಕಂತೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.