ಬಿಜೆಪಿ ವಿರುದ್ಧ ಕ್ರಮಕ್ಕೆ ವಯಲಾರ್ ಒತ್ತಾಯ

ಬುಧವಾರ, 7 ಮೇ 2008 (18:25 IST)
ನಕಲಿ ಗುರುತಿನ ಚೀಟಿ ಮುದ್ರಣ ಹಾಗೂ ಹಲವು ಅಕ್ರಮಗಳನ್ನು ಮಾಡಿರುವ ಬಿಜೆಪಿ ವಿರುದ್ಧ ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕೆಂದು ಕೇಂದ್ರ ಸಚಿವ ವಯಲಾರ್ ರವಿ ಆಗ್ರಹಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಇಂದು (ಬುಧವಾರ) ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಬಿಜೆಪಿ ಅಭ್ಯರ್ಥಿ ಬೆಂಬಲಿಗರು ಬಹಿರಂಗವಾಗಿ ಗುರುತಿನ ಚೀಟಿಗಳನ್ನು ಮಾರುತ್ತಿರುವುದು ಅಪರಾಧವಾಗಿದೆ. ಇದೇ ರೀತಿ ಬೇರೆ ಕಡೆಯೂ ಬಿಜೆಪಿ ಚುನಾವಣಾ ಅಕ್ರಮಗಳನ್ನು ಎಸಗುತ್ತಿದೆ. ಈ ಬಗ್ಗೆ ಶೀಘ್ರವೇ ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು.

ಅಧಿಕಾರಕ್ಕಾಗಿ ಬಿಜೆಪಿ ಅಕ್ರಮ ದಾರಿಯನ್ನು ಆಯ್ದುಕೊಂಡಿದೆ ಎಂದು ತಿಳಿಸಿದ ಅವರು, ಎಚ್.ಡಿ. ಕುಮಾರಸ್ವಾಮಿಯವರಿಗೆ ಮುಖ್ಯಮಂತ್ರಿ ಆಸೆ ತೋರಿಸಿ ಹಿಂಭಾಗಿಲಿನಿಂದ ಅಧಿಕಾರಕ್ಕೆ ಬಂದ ಬಿಜೆಪಿ, ಅಧಿಕಾರ ಅನುಭವಿಸಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದರು.

ತಮ್ಮ ಮಾತನ್ನು ಮುಂದುವರೆಸಿದ ಅವರು, ಅಧಿಕಾರದ ದಾಹದಿಂದ ಜೆಡಿಎಸ್ ಜೊತೆ ಕೈ ಜೋಡಿಸಿದ ಬಿಜೆಪಿಗೆ ಅಧಿಕಾರ ಸಿಗದಿದ್ದಾಗ ವಚನ ಭ್ರಷ್ಟತೆಯೆಂದು ಬೀದಿ ರಂಪಾಟ ಮಾಡಿ ಮತ್ತೆ ಅಧಿಕಾರ ಪಡೆದು ಸಾರ್ವಜನಿಕರಿಂದ ಹಾಸ್ಯಸ್ಪದಕ್ಕೀಡಾಗಿರುವುದನ್ನು ಜನತೆ ಇನ್ನು ಮರೆತಿಲ್ಲ ಎಂದು ತಿಳಿಸಿದರು.

ವೆಬ್ದುನಿಯಾವನ್ನು ಓದಿ