ಕುಬೇರನ ಗರ್ವಭಂಗ ಮಾಡಿದ ಗಣಪ

ಕುಬೇರ ಸಂಪತ್ತಿನ ದೇವತೆ. ತನ್ನ ಸಂಪತ್ತಿನ ಬಗ್ಗೆ ಕುಬೇರನಿಗೆ ಭಾರಿ ಹೆಮ್ಮೆಯಿತ್ತು. ಒಂದು ದಿನ ಭಾರಿ ಔತಣ ಕೂಟವನ್ನು ಏರ್ಪಡಿಸಿದನು. ಶಿವ, ಪಾರ್ವತಿ ಮತ್ತು ಗಣೇಶ ಸೇರಿದಂತೆ ದೇವಾನುದೇವತೆಗಳು ಉಪಸ್ಥಿತರಿದ್ದರು.

WD
ಮಗು ಗಣೇಶ ಉಟ ಮಾಡಲು ಆರಂಭಿಸಿದನು . ಅಲ್ಲಿದ್ದ ಊಟವನ್ನು ಖಾಲಿ ಮಾಡಿದರೂ ಗಣೇಶನಿಗೆ ತೃಪ್ತಿಯಾಗಲಿಲ್ಲ. ನಂತರ ಕೆಲ ಅತಿಥಿಗಳು ಉಟಕ್ಕೆಂದು ಬಂದು ನೋಡಿದಲ್ಲಿ ಎಲ್ಲ ತಟ್ಟೆಗಳು ಹಾಗೂ ವಿವಿಧ ಭಕ್ಷ್ಯಗಳು ಖಾಲಿಯಾಗಿದ್ದವು ಅರೇ ಅದೇನು ಅಚ್ಚರಿ..‍‍! ಅಲ್ಲಿದ್ದ ಭಕ್ಷ್ಯಗಳನ್ನು ಖಾಲಿ ಮಾಡಿದ ಗಣೇಶ ಅಲ್ಲಿದ್ದ ಪಾತ್ರೆಪಡಗ, ಪೀಠೋಪಕರಣಗಳು ಮತ್ತು ಕುಬೇರನ ಮುಖ್ಯ ನಗರವಾದ ಅಲಕಾಪುರಿಯನ್ನು ಕಬಳಿಸಲು ಪ್ರಾರಂಭಿಸಿದನು.

ಎಲ್ಲವನ್ನು ತಿಂದು ಮುಗಿಸಿದ ಗಣೇಶ ಕುಬೇರನನ್ನು ತಿನ್ನುವುದಾಗಿ ಬೆದರಿಕೆ ಒಡ್ಡಿದನು. ಹೆದರಿದ ಕುಬೇರ ಆತುರಾತುರವಾಗಿ ಶಿವನ ಪಾದವನ್ನು ಹಿಡಿದು ಗಣೇಶನ ಹಸಿವು ನಿಯಂತ್ರಿಸುವಂತೆ ನನಗೆ ಸಹಾಯ ಮಾಡು ಎಂದು ಕಳಕಳಿಯಿಂದ ಪ್ರಾರ್ಥಿಸಿಕೊಂಡನು.

ಪರಿಹಾರ ಬಹಳ ಸರಳ ಎಂದ ಶಿವ ಕೈತುಂಬಾ ದ್ವಿದಳಧಾನ್ಯವನ್ನು ಪುತ್ರ ಗಣೇಶನಿಗೆ ನೀಡಿದನು. ತಂದೆ ನೀಡಿದ ಧಾನ್ಯವನ್ನು ತಿಂದ ಗಣೇಶನಿಗೆ ಆಶ್ಚರ್ಯಕರವೆಂಬಂತೆ ಕೂಡಲೇ ಹಸಿವು ನೀಗಿತು.

ಈ ದಂತಕಥೆಯಿಂದ ತಿಳಿದು ಬರುವುದೇನೆಂದರೇ ಪ್ರೀತಿಯಿಂದ ಕೊಟ್ಟರೆ ಅಲ್ಪ ಅಹಾರವೂ ತೃಪ್ತಿ ನೀಡಬಲ್ಲದು. ಆದರೆ ಕುಬೇರನು ಶ್ರೀಮಂತಿಕೆಯ ಮದದಲ್ಲಿ ಆಡಂಬರದಿಂದ ವಿವಿಧ ಭಕ್ಷ್ಯಗಳಿಂದ ದೇವಾನುದೇವತೆಗಳನ್ನು ಸಂತೃಪ್ತಿಪಡಿಸಲು ಮಾಡಿದ ಭಕ್ಷ್ಯವನ್ನು ತಿಂದು ತೇಗಿದ ಗಣಪ ಕುಬೇರನಿಗೊಂದು ಪಾಠ ಕಲಿಸಿದ. ಅಹಂಕಾರವನ್ನು ಸುಡಲು ಸ್ವ ಜ್ಞಾನೋದಯ ಅಗತ್ಯ ಎಂಬುದನ್ನು ಈ ಕಥೆ ಎತ್ತಿ ತೋರಿಸುತ್ತದೆ.