ಅಕಾಲಿಕವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ದೇಶದ ಕೆಲವೊಂದು ಭಾಗಗಳಲ್ಲಿ ಭಾರೀ ಪ್ರವಾಹವು ಎದುರಾಗಿದೆ.
ಇದರಲ್ಲಿ ನಮ್ಮ ರಾಜ್ಯದ ಕೆಲ ಪ್ರದೇಶಗಳು ಕೂಡ ಒಳಗೊಂಡಿದೆ. ಹೀಗೆ ಎಡೆಬಿಡದೆ ಬರುತ್ತಿರುವ ಮಳೆಯಿಂದಾಗಿ ಡೆಂಗ್ಯೂವಿನಂತಹ ಜ್ವರವು ಕೂಡ ಹಬ್ಬುತ್ತಿದ್ದು, ಡೆಂಗ್ಯೂ ಜ್ವರ ಪೀಡಿತರ ಸಂಖ್ಯೆಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.
ಡೆಂಗ್ಯೂ ಜ್ವರವು ತೀವ್ರವಾದರೆ ಆಗ ಇದರಿಂದ ಹಲವಾರು ರೀತಿಯ ಸಮಸ್ಯೆಗಳು ಎದುರಾಗಬಹುದು ಮತ್ತು ಪ್ರಾಣಕ್ಕೆ ಹಾನಿ ಉಂಟು ಮಾಡಬಹುದು. ಡೆಂಗ್ಯೂ ಜ್ವರದ ಬಗ್ಗೆ ಸರಿಯಾಗಿ ತಿಳಿದುಕೊಂಡು ಅದನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಅತೀ ಅಗತ್ಯ.
ಡೆಂಗ್ಯೂ ಜ್ವರವು ಯಾರಿಗೆ ಬರಬಹುದು ಎಂದು ಹೇಳುವುದು ತುಂಬಾ ಕಷ್ಟ. ಆದರೆ ಈ ಜ್ವರವು ಹಬ್ಬಿದರೆ ಆಗ ಅದರ ಕೆಲವೊಂದು ಲಕ್ಷಣಗಳಿಗೆ ಮನೆಯಲ್ಲೇ ಚಿಕಿತ್ಸೆ ಪಡೆದುಕೊಂಡು ಅದನ್ನು ನಿವಾರಣೆ ಮಾಡಬಹುದು. ಆದರೆ ಡೆಂಗ್ಯೂ ಜ್ವರವು ತೀವ್ರವಾದರೆ ಆಗ ಇದು ಹಾನಿ ಉಂಟು ಮಾಡಬಹುದು. ಒಂದು ಸಲ ಡೆಂಗ್ಯೂ ಜ್ವರವು ಬಂದಿದ್ದರೆ ಆಗ ಮತ್ತೊಮ್ಮೆ ಅದರ ಮತ್ತೊಂದು ರೂಪವು ದಾಳಿ ಮಾಡಬಹುದು.
ಡೆಂಗ್ಯೂ ಜ್ವರವು ತೀವ್ರವಾದ ವೇಳೆ ಅದರಿಂದ ಡೆಂಗ್ಯೂ ರಕ್ತಸ್ರಾವದ ಜ್ವರ ಮತ್ತು ಡೆಂಗ್ಯೂ ಆಘಾತ ಉಂಟಾಗಬಹುದು. ಇವೆರಡು ಪ್ರಾಣಕ್ಕೆ ಹಾನಿ ಉಂಟು ಮಾಡಬಹುದು. ಡೆಂಗ್ಯೂವಿನ ವಿವಿಧ ರೀತಿಯ ವೈರಸ್ ಗಳಿದ್ದರೂ ಯಾವುದೇ ಒಂದು ವೈರಸ್ ನಿಂದ ಮನುಷ್ಯನ ಮೇಲೆ ದಾಳಿ ಆಗಬಹುದು. ಡೆಂಗ್ಯೂವಿನ ರಕ್ತಸ್ರಾವದ ಜ್ವರ ಕಾಡಿದರೆ ಆಗ ದೇಹವು ಆಘಾತಕ್ಕೆ ಒಳಗಾಗಬಹುದು. ಡೆಂಗ್ಯೂವಿನ ತೀವ್ರ ರೀತಿಯ ಸೋಂಕುವಿನಿಂದಾಗಿ ಅತಿಯಾದ ರಕ್ತಸ್ರಾವವು ಉಂಟಾಗಬಹುದು. ಇದರಿಂದಾಗಿ ದೇಹದಲ್ಲಿನ ಅಂಗಾಂಗಗಳು ಕೂಡ ವೈಫಲ್ಯಕ್ಕೆ ಒಳಗಾಗಬಹುದು. ಹೊಟ್ಟೆ ನೋವು, ವಾಕರಿಕೆ, ತಲೆನೋವು, ವಾಂತಿ, ರಕ್ತಸ್ರಾವು ಕಂಡುಬರುವುದು.
ರಕ್ತ ಸೋರಿಕೆ
ಡೆಂಗ್ಯೂ ತೀವ್ರವಾದರೆ ಆಗ ಇದರಿಂದ ರಕ್ತನಾಳಗಳಿಗೆ ಹಾನಿ ಆಗುವುದು ಮತ್ತು ಇದರಿಂದ ರಕ್ತದಲ್ಲಿ ಸೋರಿಕೆ ಉಂಟಾಗುವುದು ಮತ್ತು ಇದು ಚರ್ಮದಡಿಯಲ್ಲಿ ಬಂದು ಜಮೆ ಆಗುವುದು. ಸೋಂಕಿತ ಸೊಳ್ಳೆಯು ಕಚ್ಚಿದ ವೇಳೆ ಅದು ಆ ವ್ಯಕ್ತಿಯ ಪ್ರತಿರೋಧಕ ವ್ಯವಸ್ಥೆಯ ಮೇಲೆ ಮಾತ್ರವಲ್ಲದೆ, ರಕ್ತನಾಳಗಳ ಮೇಲೆ ದಾಳಿ ಮಾಡುವುದು.
ಇದರಿಂದಾಗಿ ತೀವ್ರಗತಿಯಲ್ಲಿ ವೈರಸ್ ದ್ವಿಗುಣವಾಗುತ್ತಾ ಹೋಗುವುದು. ವೈರಸ್ ದ್ವಿಗುಣವಾಗುವ ಕಾರಣದಿಂದಾಗಿ ಸೋಂಕಿತ ವ್ಯಕ್ತಿಯ ಪ್ಲೇಟ್ಲೆಟ್ ಗೆ ಹಾನಿ ಆಗುವುದು. ಪ್ರತಿರೋಧಕ ವ್ಯವಸ್ಥೆಯು ಗೊಂದಲಕ್ಕೆ ಬಿದ್ದು ದಾಳಿ ಮಾಡುವ ಕಾರಣದಿಂದಾಗಿ ಪ್ಲೇಟ್ಲೆಟ್ ಪ್ರಮಾಣವು ಕಡಿಮೆ ಆಗುವುದು.
ಶ್ವಾಸಕೋಶ
ಡೆಂಗ್ಯೂ ಜ್ವರವು ತೀವ್ರವಾಗಿ ಕಾಡುವ ವೇಳೆ ಕಾಣಿಸಿಕೊಳ್ಳುವ ಮತ್ತೊಂದು ಲಕ್ಷಣವೆಂದರೆ ಅದು ಶ್ವಾಸಕೋಶದ ಸಮಸ್ಯೆ. ಉಸಿರಾಟದ ತೊಂದರೆ, ಎದೆ ನೋವು, ಆಮ್ಲಜನಕ ಮಟ್ಟದಲ್ಲಿ ಕುಸಿತ ಉಂಟಾಗಬಹುದು.
ಈ ಲಕ್ಷಣಗಳನ್ನು ಗಮನಿಸಿ ಕೂಡಲೇ ಅದಕ್ಕೆ ಚಿಕಿತ್ಸೆ ಪಡೆಯಬೇಕು. ಡೆಂಗ್ಯೂ ಜ್ವರವು ತೀವ್ರವಾದರೆ ಆಗ ಅದರಿಂದ ಅಂಗಾಂಗಳ ಮೇಲೆ ಪರಿಣಾಮ ಬೀರಬಹುದು.
ಸೂಕ್ತ ಚಿಕಿತ್ಸೆ
ಡೆಂಗ್ಯೂ ಜ್ವರವು ತೀವ್ರವಾಗಿ ಕಾಡುವಂತಹ ವ್ಯಕ್ತಿಗೆ ವಿವಿಧ ರೀತಿಯ ಚಿಕಿತ್ಸೆ ನೀಡಲಾಗುತ್ತದೆ. ಇದರಲ್ಲಿ ರಕ್ತ ವರ್ಗಾವಣೆ, ಆಮ್ಲಜನಕ ಥೆರಪಿ, ಎಲೆಕ್ಟ್ರೋಲೈಟ್ ಥೆರಪಿ ಮತ್ತು ಇತರ ಕೆಲವು ಚಿಕಿತ್ಸೆಗಳನ್ನು ನೀಡಲಾಗುತ್ತದೆ. ಡೆಂಗ್ಯೂ ಜ್ವರವು ತುಂಬಾ ಕಡಿಮೆಯಿದ್ದರೆ ಆಗ ಕೆಲವೊಂದು ಔಷಧಿಗಳಿಂದಲೂ ಇದನ್ನು ನಿವಾರಿಸಬಹುದು.
ಡೆಂಗ್ಯೂವಿನಲ್ಲಿ ಡೆಇಎನ್ ವಿ-1, ಡಿಇಎನ್ ವಿ-2, ಡಿಇಎನ್ ವಿ-3 ಮತ್ತು ಡಿಇಎನ್ ವಿ-4 ಎನ್ನುವ ನಾಲ್ಕು ವಿಧಗಳೂ ಇವೆ. 2015ರಲ್ಲಿ ತಯಾರಿಸಲ್ಪಟ್ಟಿರುವಂತಹ ಲಸಿಕೆಯು ಇದರಲ್ಲಿ ಒಂದು ವಿಧದ ವಿರುದ್ಧ ಹೋರಾಡುವುದು. ಇತರ ಮೂರು ವಿಧಗಳು ದಾಳಿ ಮಾಡಬಹುದು. ಇದಕ್ಕಾಗಿ ಮುಂಜಾಗ್ರತೆ ತೆಗೆದುಕೊಳ್ಳುವುದು ಒಳ್ಳೆಯ ವಿಧಾನ.