ಅತಿಯಾಗಿ ನಿದ್ದೆ ಮಾಡುವುದು ಅಪಾಯಕಾರಿನಾ!!!!

ಶನಿವಾರ, 27 ಅಕ್ಟೋಬರ್ 2018 (15:54 IST)
ನಮ್ಮ ಯುವಜನತೆಯನ್ನು 3 ವಿಭಾಗಗಳನ್ನಾಗಿ ವಿಂಗಡಿಸಬಹುದು. ರಾತ್ರಿ ಗೆಳೆಯರೊಂದಿಗೆ ಪಾರ್ಟಿ, ಲಾಂಗ್ ಡ್ರೈವ್, ನೈಟ್ ಔಟ್, ಮೊಬೈಲ್‌ನಲ್ಲಿ ಕಾಲಹರಣ ಮಾಡುವವರದ್ದು ಒಂದು ವರ್ಗವಾದರೆ ರಾತ್ರಿ ಪಾಳಿಯ ಕೆಲಸವನ್ನು ಮಾಡುವವರು ಎರಡನೆಯ ವರ್ಗ. ಇನ್ನು ಮೂರನೆಯ ವರ್ಗದ ಜನರು ಏನನ್ನೂ ಕೆಲಸ ಕಾರ್ಯವನ್ನು ಮಾಡದೇ ಸುಮ್ಮನೆ ತಿಂದುಂಡು ಮಲಗುವ ಕೆಲಸವನ್ನು ಮಾಡುವವರು. 
ಮೊದಲೆರಡು ವರ್ಗದ ಜನರು ಕಳೆದುಕೊಳ್ಳುವುದು ನಿದ್ರೆಯನ್ನು. ಹಾಗಾಗಿ ನಿದ್ರೆ ಕಡಿಮೆಯಾದರೂ ಕಷ್ಟವೇ. ನಿದ್ದೆ ಅಗತ್ಯಕ್ಕಿಂತ ಜಾಸ್ತಿ ಆದರೂ ಕಷ್ಟವೇ. ಆದರೆ ನಿದ್ದೆ ಕಡಿಮೆಯಾಗಿ ಆರೋಗ್ಯವನ್ನು ಹಾಳು ಮಾಡಿಕೊಳ್ಳುವವರಿಗಿಂತ ಐಶಾರಾಮಿ ಜೀವನದ ಶೈಲಿಗೆ ಮಾರುಹೋಗಿ ನಿದ್ದೆಯನ್ನು ಅತಿಯಾಗಿ ಮಾಡಿ ಆರೋಗ್ಯವನ್ನು ಹಾಳು ಮಾಡಿಕೊಳ್ಳುವವರೇ ಜಾಸ್ತಿ. ಒಬ್ಬ ವ್ಯಕ್ತಿಗೆ ಸರಾಸರಿಯಾಗಿ 7 ರಿಂದ 8 ಗಂಟೆ ನಿದ್ದೆ ಅವಶ್ಯವಿರುತ್ತದೆ.
 
* ಅತಿಯಾದ ನಿದ್ದೆಯು ಮೊದಲು ಪ್ರಭಾವ ಬೀರುವುದೇ ದೇಹದ ತೂಕಕ್ಕೆ. ಅತಿಯಾದ ನಿದ್ದೆಯನ್ನು ಮಾಡುವುದರಿಂದ ಕ್ಯಾಲರಿಗಳು ಅಧಿಕವಾಗಿ ತೂಕವೂ ಅಧಿಕವಾಗಿ ಬೊಜ್ಜು ಬರುತ್ತದೆ.
 
* ಅತಿಯಾದ ನಿದ್ದೆಯಿಂದ ಮಧುಮೇಹ ಬರುವ ಸಾಧ್ಯತೆಗಳಿರುತ್ತದೆ. ಅತಿಯಾದ ನಿದ್ದೆಯಿಂದ ದೇಹದಲ್ಲಿ ಗ್ಲುಕೋಸ್ ಪ್ರಮಾಣ ಹೆಚ್ಚಾಗಿ ದೈಹಿಕ ಚಟುವಟಿಕೆಯು ಕಡಿಮೆಯಾಗಿ ಗ್ಲುಕೋಸ್ ಪ್ರಮಾಣ ಕರಗದೇ ಉಳಿಯುವುದರಿಂದ ಮಧುಮೇಹ ಬರುತ್ತದೆ.
 
* ಅತಿಯಾಗಿ ನಿದ್ದೆ ಮಾಡುವುದರಿಂದ ಹೃದಯ ಸಂಬಂಧಿ ಖಾಯಿಲೆಗಳು ಬರುವ ಸಾಧ್ಯತೆಗಳಿರುತ್ತದೆ. ಸಂಶೋಧನೆಯ ಪ್ರಕಾರ 9 ರಿಂದ 11 ಗಂಟೆಗಳು ಮಲಗುವವರು 8 ಗಂಟೆಗಳ ಕಾಲ ಮಲಗುವವರಿಗಿಂತ 38% ರಷ್ಟು ಹೆಚ್ಚು ಹೃದಯಸಂಬಂಧಿ ಖಾಯಿಲೆಯನ್ನು ಹೊಂದುತ್ತಾರೆ ಎಂಬುದು ಸಾಬೀತಾಗಿದೆ. 
 
* ಅತಿಯಾಗಿ ನಿದ್ದೆಯು ಖಿನ್ನತೆಗೆ ಒಳಗಾಗುವಂತೆ ಮಾಡುತ್ತದೆ. ಮನಸ್ಥಿತಿಯ ಮೇಲೆ ಪರಿಣಾಮ ಬೀರುವುದರಿಂದ ಬಹುಬೇಗನೆ ಬೇಸರಕ್ಕೆ ಒಳಗಾಗುವ ಸಾಧ್ಯತೆ ಇರುತ್ತದೆ. ಅತಿಯಾದ ನಿದ್ದೆ ಮಾಡಿದರೆ ಹೆಚ್ಚು ಚುರುಕಾಗಿರಲು ಸಾಧ್ಯವಾಗದೇ ಮನಸ್ಸನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳಲೂ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಬಹುದು.
 
* ಅತಿಯಾಗಿ ನಿದ್ದೆ ಮಾಡುವುದರಿಂದ ಮೆದುಳಿನ ಕಾರ್ಯ ಕುಸಿಯುವುದಲ್ಲದೇ ಮೆದುಳಿನ ಶಕ್ತಿ ದುರ್ಬಲವಾಗುತ್ತಾ ಹೋಗುತ್ತದೆ.
* ವಾರವೆಲ್ಲಾ ಪೂರ್ತಿಯಾಗಿ ದುಡಿದು ವಾರಾಂತ್ಯದಲ್ಲಿ ಅಧಿಕವಾಗಿ ನಿದ್ದೆ ಮಾಡುವವರು ನಮ್ಮಲ್ಲಿದ್ದಾರೆ. ಹೀಗೆ ವಾರಾಂತ್ಯದಲ್ಲಿ ಅಥವಾ ರಜಾ ದಿನಗಳಲ್ಲಿ ಹೆಚ್ಚು ಸಮಯ ನಿದ್ದೆ ಮಾಡುವುದರಿಂದ ಕೆಲವು ನರಗಳ ಮೇಲೆ ಇದು ಪರಿಣಾಮ ಬೀರುವುದಲ್ಲದೇ ತಲೆನೋವೂ ಸಹ ಕಾಣಿಸಿಕೊಳ್ಳುತ್ತದೆ. 
 
* ಅತಿಯಾದ ನಿದ್ದೆಯಿಂದ ಬೆನ್ನುನೋವು ಕಾಣಿಸಿಕೊಳ್ಳುವ ಸಾಧ್ಯತೆಗಳು ಬಹಳ ಇರುತ್ತವೆ. ಅತಿಯಾದ ನಿದ್ದೆ ಮತ್ತು ಒಂದೇ ಕಡೆ ಕುಳಿತು ಕೆಲಸ ಮಾಡುವುದರಿಂದ ದೈಹಿಕ ಚಟುವಟಿಕೆ ಕಡಿಮೆಯಾಗಿ ಬೆನ್ನುನೋವು ಕಾಣಿಸಿಕೊಳ್ಳುವ ಸಾಧ್ಯತೆಗಳಿರುತ್ತದೆ.
 
* ಸಂಶೋಧನೆಗಳ ಪ್ರಕಾರ ದಿನಕ್ಕೆ 9 ಅಥವಾ ಅದಕ್ಕಿಂತ ಹೆಚ್ಚು ಗಂಟೆಗಳ ಕಾಲ ಮಲಗುವ ಜನರಿಗೆ 7 ರಿಂದ 8 ಗಂಟೆಗಳ ಕಾಲ ಮಲಗುವವರಿಗಿಂತ ಹೆಚ್ಚು ಅಕಾಲಿಕ ಮರಣ ಬರುವ ಸಂಭವವಿರುತ್ತದೆ ಎಂದು ಸಾಬೀತಾಗಿದೆ. 
 
ಅತಿಯಾದ ನಿದ್ದೆಯಿಂದ ಇಷ್ಟೆಲ್ಲಾ ತೊಂದರೆಗಳಿರುವುದರಿಂದ ಇನ್ನಾದರೂ ಒಂದೇ ಸಲ ಜಾಸ್ತಿ ಹೊತ್ತು ಮಲಗುವುದಕ್ಕಿಂತ ನಿಗದಿತ ಸಮಯಕ್ಕೆ ಸರಿಯಾಗಿ ನಿದ್ದೆ ಮಾಡುವುದು ಒಳಿತು. ಇದರಿಂದ ಆರೋಗ್ಯಕ್ಕೂ ಒಳ್ಳೆಯದು. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ